ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಕೊರೊನಾ ಪ್ರಕರಣ ಹಾಗೂ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಇದೀಗ ಡಿಆರ್ಡಿಒ ಅಭಿವೃದ್ಧಿ ಪಡಿಸಿರುವ ಔಷಧಕ್ಕೆ ಹಸಿರು ನಿಶಾನೆ ತೋರಲಾಗಿದ್ದು, ಈ ಔಷಧಿಯನ್ನು ನೀರಿನ ಮೂಲಕ ಸೇವನೆ ಮಾಡಬಹುದಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ರೋಗಿಗಳಿಗೆ ನೀಡುವ ಔಷಧಿಗೆ ಇದೀಗ ದೇಶದ ಉನ್ನತ ಔಷಧ ನಿಯಂತ್ರಕ ತುರ್ತು ಬಳಕೆ ಮಾಡಲು ಅನುಮೋದನೆ ನೀಡಿದೆ. ಕೋವಿಡ್ ನಿರೋಧಕ ಔಷಧ 2-ಡಿಯೋಕ್ಸಿ-ಡಿ-ಗ್ಲೂಕೋಸ್ ಔಷಧ ಪುಡಿ ರೂಪದಲ್ಲಿ ಲಭ್ಯವಾಗಲಿದ್ದು, ನೀರಿನಲ್ಲಿ ಕರಗಿಸಿ ಸೇವನೆ ಮಾಡಬಹುದಾಗಿದೆ.
ಕ್ಲಿನಿಕಲ್ ಪ್ರಯೋಗದ ಫಲಿತಾಂಶದ ಪ್ರಕಾರ ಕೋವಿಡ್ ಸೋಂಕಿಗೊಳಗಾಗಿರುವ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಡಿಯೋಕ್ಸಿ-ಡಿ-ಗ್ಲೂಕೋಸ್ ಸಹಾಯವಾಲಿದ್ದು, ಅಪಾರ ಪ್ರಯೋಜನ ನೀಡಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಂತ್ಯಕ್ರಿಯೆ ನಡೆಸಲು ಹಣವಿಲ್ಲ, ಸಮಾಧಿ ಅಗೆದು ತಾಯಿ ಅಂತಿಮ ಸಂಸ್ಕಾರ ನಡೆಸಿದ ಮಗಳು
ಏಪ್ರಿಲ್ 2020ರಲ್ಲಿ ಕೋವಿಡ್ ಸೋಂಕಿನ ವಿರುದ್ಧ ವಿಜ್ಞಾನಿಗಳು ಹೈದರಾಬಾದ್ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಸಹಾಯದಿಂದ ಪ್ರಯೋಗ ನಡೆಸಿದ್ದರು. ಅದರಲ್ಲಿ ಇದು ಯಶಸ್ವಿಯಾಗಿದೆ. ಈ ಫಲಿತಾಂಶ ಆಧರಿಸಿ ಡಿಸಿಜಿಐ ಕೋವಿಡ್ ರೋಗಿಗಳ ಮೇಲೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವನ್ನ ಮೇ 2020ರಲ್ಲಿ ನಡೆಸಿತು. 2020ರ ನವೆಂಬರ್ ತಿಂಗಳಲ್ಲಿ 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಲಾಗಿತ್ತು. ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್,ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಮಾರ್ಚ್ 2021ರವರೆಗೆ 3ನೇ ಹಂತದ ಪ್ರಯೋಗ ನಡೆಸಲಾಗಿತ್ತು.
3ನೇ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶದ ಡೇಟಾ ಡಿಸಿಜಿಐಗೆ ನೀಡಲಾಗಿತ್ತು. ಫಲಿತಾಂಶದ ಆಧಾರದ ಮೇಲೆ ಇದೀಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಬಳಕೆಗೆ ಅನುಮೋದನೆ ನೀಡಿದೆ. ಡಿಆರ್ಡಿಒ ಲ್ಯಾಬ್ ಮತ್ತು ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಕೋವಿಡ್ ನಿರೋಧಕ ಔಷಧ 2-ಡಿಯೋಕ್ಸಿ-ಡಿ-ಗ್ಲೂಕೋಸ್(2-ಡಿಜಿ)ಯನ್ನ ಅಭಿವೃದ್ಧಿ ಪಡಿಸಿದೆ.