ದಾಮೋಹ್(ಮಧ್ಯಪ್ರದೇಶ): ಆಟವಾಡುತ್ತಿದ್ದ ಬಾಲಕ ಅಚಾನಕ್ಕಾಗಿ ಮನೆಯಂಗಳದಲ್ಲಿದ್ದ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ದಾಮೋಹ್ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ನೇಹಿತನ ಸಮಯಪ್ರಜ್ಞೆಯಿಂದ ಬಾಲಕನ ಜೀವ ಉಳಿದಿದೆ.
ಏನಾಯ್ತು?: ಇಬ್ಬರು ಬಾಲಕರು ಮನೆಯಂಗಳದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅರ್ನವ್ ಎಂಬಾತ ಬಾವಿಯ ಕಟ್ಟೆಯ ಮೇಲೆ ಹೋಗಿದ್ದಾನೆ. ಅಚಾನಕ್ಕಾಗಿ ಬಾಲಕ ಅದರ ಮುಚ್ಚಳವನ್ನು ತುಳಿದಾಗ ಅದು ತೆರೆದುಕೊಂಡಿದೆ. ಇದರಿಂದ ಆತ ಬಾವಿಯೊಳಗೆ ಬಿದ್ದಿದ್ದಾನೆ. ಇದನ್ನು ಕಂಡ ಸ್ನೇಹಿತ ಸನ್ಯಾಮ್ ತಕ್ಷಣವೇ ಅಲ್ಲಿಗೆ ಬಂದು ಬಾವಿಯೊಳಗೆ ಇಣುಕಿ ನೋಡಿದ್ದಾನೆ.
ನೀರಲ್ಲಿ ಒದ್ದಾಡುತ್ತಿದ್ದ ಸ್ನೇಹಿತನಿಗೆ ಅದರೊಳಗೆ ಇಳಿಬಿಟ್ಟಿದ್ದ ಪೈಪ್ ಹಿಡಿದುಕೊಳ್ಳಲು ತಿಳಿಸಿದ್ದಾನೆ. ಬಳಿಕ ಕುಟುಂಬಸ್ಥರು, ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಬಂದ ಮನೆಯವರು ಬಾವಿಗೆ ಹಗ್ಗವನ್ನು ಇಳಿಬಿಟ್ಟು ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕ ಬಾವಿಗೆ ಬೀಳುತ್ತಿರುವ ದೃಶ್ಯ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಓದಿ: ಕೂಲಿ ಕೆಲಸ ಮಾಡುವ ವೃದ್ಧೆಗೆ ₹8 ಕೋಟಿ ತೆರಿಗೆ ಕಟ್ಟಲು ಸೂಚಿಸಿದ ಆದಾಯ ತೆರಿಗೆ ಇಲಾಖೆ!