ಅಗರ್ತಲಾ: ಸಿತ್ರಾಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಐದು ತಂಡಗಳು ಸೋಮವಾರ ಅಗರ್ತಲಾಕ್ಕೆ ಆಗಮಿಸಿವೆ.
ಈ ಕುರಿತು ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ರಾಜ್ಯ ವಿಪತ್ತು ನಿರ್ವಹಣೆಯ ರಾಜ್ಯ ಯೋಜನಾಧಿಕಾರಿ ಡಾ. ಶರತ್ ಕುಮಾರ್ ದಾಸ್, ಇಂದು ಬೆಳಗ್ಗೆ 125 ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್‌ನ ಒಬ್ಬ ಅಧಿಕಾರಿಯನ್ನು ಒಳಗೊಂಡ ಐದು ತಂಡಗಳು ರಾಜ್ಯಕ್ಕೆ ಆಗಮಿಸಿವೆ. ಉನಕೋಟಿ ಜಿಲ್ಲೆಯ ಕುಮಾರ್‌ಘಾಟ್, ಖೋವೈ ಜಿಲ್ಲೆಯ ತೆಲಿಯಮುರಾ, ದಕ್ಷಿಣ ಜಿಲ್ಲೆಯ ಸಂತಿರ್‌ಬಜಾರ್, ಗೋಮತಿ ಜಿಲ್ಲೆಯ ಉದಯಪುರ ಮತ್ತು ಸೆಪಹಿಜಾಲಾ ಜಿಲ್ಲೆಯ ಗೋಕುಲನಗರದಲ್ಲಿ ಇವರನ್ನು ನಿಯೋಜಿಸಲಾಗುವುದು ಎಂದರು.
ಇದುವರೆಗೆ ಯಾವುದೇ ಹಾನಿಯಾದ ವರದಿಯಾಗಿಲ್ಲ. ನಾಳೆ ಬೆಳಗ್ಗೆ ಸುಮಾರು 5 ಗಂಟೆಗೆ ತ್ರಿಪುರಾದಿಂದ ಸುಮಾರು 120 ಕಿಮೀ ದೂರದಲ್ಲಿರುವ ಬಾಂಗ್ಲಾದೇಶದ ಟಿಂಕೋನಾ ದ್ವೀಪದಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಮತ್ತು ಉಪ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ತುರ್ತು ಪರಿಶೀಲನಾ ಸಭೆ ನಡೆಸಿದ್ದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಮತ್ತು ತೀವ್ರ ವಾಯುಭಾರ ಕುಸಿತದಿಂದಾಗಿ ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 24 ರಂದು ಪ್ರತ್ಯೇಕ ಸ್ಥಳಗಳಲ್ಲಿ ಪ್ರತಿ ಗಂಟೆಗೆ 70 ಕಿಮೀ ವೇಗದಲ್ಲಿ ಗಾಳಿ ಬೀಸುವ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 25 ರಂದು 40 ರಿಂದ 50 ಹಾಗೂ 60 ಕಿಮೀ ವೇಗದಲ್ಲಿ ಬೀಸಬಹುದು. ಮುಂದಿನ 24 ಗಂಟೆಗಳಲ್ಲಿ ಗರಿಷ್ಠ 200 ಮಿಲಿಮೀಟರ್ ಮಳೆ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಬಿರು ಬೇಸಿಗೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಸಿದ ಚಂಡಮಾರುತ