ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳ ಚುನಾವಣಾ ರ‍್ಯಾಲಿ, ರೋಡ್ ಶೋಗಳಿಗೆ ವಿಧಿಸಿರುವ ನಿರ್ಬಂಧವನ್ನು ಚುನಾವಣಾ ಆಯೋಗ ಜ.31ರವರೆಗೆ ವಿಸ್ತರಿಸಿದೆ.
ಫೆ.10 ಹಾಗೂ 14 ರಂದು ನಡೆಯಲಿರುವ ಮೊದಲೆರೆಡು ಹಂತಗಳ ಚುನಾವಣೆಗೆ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಮೊದಲ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಜನವರಿ 28 ರಿಂದ ಹಾಗೂ ಎರಡನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಫೆಬ್ರವರಿ 1 ರಿಂದ ಚುನಾವಣೆಗೆ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಇಲ್ಲಿ ಭೌತಿಕ ಸಾರ್ವಜನಿಕರ ಸಭೆಗಳಿಗೆ ಅನುಮತಿ ನೀಡಿದೆ. ಜೊತೆಗೆ ಕನಿಷ್ಠ 5 ಮಂದಿಯಿಂದ ಮನೆ ಮನೆ ಪ್ರಚಾರದ ಮಿತಿಯನ್ನು 10ಕ್ಕೆ ಏರಿಸಿದೆ.
ಇದರ ಜೊತೆಗೆ ಕೋವಿಡ್ ನಿಮಯಮಗಳನ್ನು ಪಾಲಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿಡಿಯೋ ಆಧಾರಿತ ವ್ಯಾನ್‌ಗಳ ಮೂಲಕ ಪ್ರಚಾರಕ್ಕೂ ಚುನಾವಣಾ ಆಯೋಗ ಅನುಮತಿ ನೀಡಿದೆ.
ಐದು ರಾಜ್ಯಗಳ ಚುನಾವಣಾ ಅಧಿಕಾರಿಗಳು ಹಾಗೂ ಉಪ ಆಯುಕ್ತರೊಂದಿಗೆ ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರು ದೆಹಲಿಯಲ್ಲಿಂದು ವರ್ಚುವಲ್ ಸಭೆ ನಡೆಸಿದ್ದು, ಕೋವಿಡ್ ಪ್ರಕರಣಗಳ ವ್ಯಾಪ್ತಿ, ವ್ಯಾಕ್ಸಿನೇಷನ್ ಪ್ರಕ್ರಿಯೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಈಗಾಗಲೇ ಜಾರಿಯಲ್ಲಿರುವ ನಿರ್ಬಂಧಗಳಲ್ಲಿ ಕೊಂಚ ಸಡಿಲಿಕೆ ಮಾಡಲು ನಿರ್ಧರಿಸಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗೆ ಜನವರಿ 8 ರಂದು ಇಸಿ ಅಧಿಸೂಚನೆ ಹೊರಡಿಸಿದೆ. ಆದರೆ ಕೊರೊನಾ ರೂಪಾಂತರಿ ಒಮಿಕ್ರಾನ್ ಭೀತಿಯಿಂದಾಗಿ ಚುನಾವಣಾ ರ‍್ಯಾಲಿಗಳು, ರೋಡ್ ಶೋ, ಬೈಕ್ ರ‍್ಯಾಲಿಗಳಂತರ ಭೌತಿಕ ಪ್ರಚಾರ ಕಾರ್ಯಕ್ರಮಗಳನ್ನು ಇದೇ 15ರ ವರೆಗೆ ನಿಷೇಧ ಮಾಡಲಾಗಿತ್ತು. ಆ ಬಳಿಕವೂ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ನಿಷೇಧವನ್ನು ಜ.22ರ ವರೆಗೆ ವಿಸ್ತರಣೆ ಮಾಡಲಾಗಿತ್ತು.
ಇಂದಿಗೆ ನಿಷೇಧದ ಅವಧಿ ಮುಕ್ತಾಯ ಆಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ವಾರದ ಮಟ್ಟಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಳಾಂಗಣದಲ್ಲಿ 300 ಮಂದಿಯನ್ನು ಸೇರಿಸಲು ಈ ಮೊದಲು ಅವಕಾಶ ನೀಡಲಾಗಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ