ಗಯಾ (ಬಿಹಾರ) : ಪ್ರೀತಿಸುವ ವೇಳೆ ಇದ್ದ ಧೈರ್ಯ, ಮದುವೆ ವಿಷಯ ಬಂದಾಗ ಇರಲ್ಲ ಅಂತಾರೆ. ಅದರಿಂದ ಅನಾಹುತಗಳೂ ನಡೆದ ಪ್ರಸಂಗಗಳಿವೆ. ಅಂಥದ್ದೇ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸುತ್ತಿದ ಹುಡುಗಿ ಮದುವೆಗೆ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ವಿದ್ಯಮಾನ ನಡೆದಿದೆ. ಯುವಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಘಟನೆಯ ಸಂಪೂರ್ಣ ವಿವರ : ಜಾರ್ಖಂಡ್‌ನ ಮೂಲದ ಯುವಕ ಮತ್ತು ಬಿಹಾರದ ಯುವತಿ ಪ್ರೀತಿಸುತ್ತಿದ್ದರು. ಸೋಮವಾರ ಬಿಹಾರದ ಗಯಾದಲ್ಲಿ ಇಬ್ಬರ ಮಧ್ಯೆ ಮದುವೆ ವಿಚಾರಕ್ಕೆ ವಾಗ್ವಾದ ನಡೆದು ಗೆಳತಿಯ ಎದುರೇ ಗೆಳೆಯ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ರಕ್ಷಿಸಿ ಗಯಾದ ಮಗಧ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮದುವೆಯಾಗು ಎಂದು ಪರಿ ಪರಿಯಾಗಿ ಬೇಡಿಕೊಂಡ ಯುವಕ: ಜಾರ್ಖಂಡ್ ನಿವಾಸಿಯಾದ ಯುವಕ, ತನ್ನೂರಿಗೆ ಬಂದಿದ್ದ ಯುವತಿಯನ್ನು ಕಂಡು ಪರಿಚಯ ಬೆಳೆಸಿಕೊಂಡಿದ್ದ. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಕೆಲದಿನವರೆಗೆ ಜಾರ್ಖಂಡ್ನಲ್ಲಿದ್ದ ಯುವತಿ ಬಿಹಾರಕ್ಕೆ ವಾಪಸ್ ಆಗಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸೋಮವಾರದಂದು ಬಿಹಾರದ ಗಯಾಕ್ಕೆ ಆಗಮಿಸಿದ ಯುವಕ, ಮದುವೆಯಾಗುವಂತೆ ಬೇಡಿಕೆ ಇಟ್ಟಿದ್ದಾನೆ.
ಆದರೆ, ಯುವತಿ ಇದನ್ನು ನಿರಾಕರಿಸಿದ್ದಾಳೆ. ಯಾವುದೇ ಕಾರಣ ನೀಡದೇ ವಿವಾಹವಾಗಲು ನಿರಾಕರಣೆ ಮಾಡಿದ್ದಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದಾದ ಬಳಿಕ ಯುವಕ, ತನ್ನ ಪ್ರಿಯತಮೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಅಲ್ಲಿದ್ದವರು ಹೇಗೋ ಯುವಕನನ್ನು ರಕ್ಷಿಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹಚ್ಚಿಕೊಂಡು ತೀವ್ರ ಸುಟ್ಟ ಗಾಯಗಳಿಂದ ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಯುವಕ, ಮದುವೆಯಾಗು, ಮದುವೆಯಾಗು ಎಂದು ಕೇಳಿಕೊಳ್ಳುತ್ತಿದ್ದ ಎಂದು ಅಲ್ಲಿದ್ದವರು ತಿಳಿಸಿದ್ದಾರೆ.
ಯುವಕನೇ ಪೆಟ್ರೋಲ್ ಎರಚಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಾಯಾಳುವಿಗೆ ಮಗಧ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮದುವೆಯಾಗುವ ವಿಚಾರಕ್ಕಾಗಿ ಈ ಘಟನೆ ನಡೆದಿದೆ. ಚೇತರಿಸಿಕೊಂಡ ಬಳಿಕ ಯುವಕ ಮತ್ತು ಯುವಕನ ಹೇಳಿಕೆ ಪಡೆದು ಕ್ರಮ ಜರುಗಿಸಲಾಗುವುದು ಎಂದು ಡೆಲ್ಹಾ ಪೊಲೀಸ್ ಠಾಣಾಧಿಕಾರಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Nipah virus: ಕೇರಳದಲ್ಲಿ ನಿಫಾ ವೈರಸ್ನಿಂದ ಇಬ್ಬರು ಸಾವು.. ಖಚಿತ ಪಡಿಸಿದ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ