ಅಲಪ್ಪುಳ( ಕೇರಳ): ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 27 ವರ್ಷಗಳ ಬಳಿಕ ಬಂಧಿಸಲಾಗಿದೆ. ಕೇರಳದ ಅಲಪ್ಪುಳ ಜಿಲ್ಲೆ ಮಾವೇಲಿಕ್ಕರದಲ್ಲಿ ಮರಿಯಮ್ಮ (61) ಎಂಬ ಗೃಹಿಣಿ ಹತ್ಯೆ ಮಾಡಿದ ಪ್ರಕರಣದಲ್ಲಿ 27 ವರ್ಷಗಳ ನಂತರ ಈ ಬಂಧನ ಮಾಡಲಾಗಿದೆ. ಮಾವೇಲಿಕ್ಕರ ಪೊಲೀಸರು ಭಾನುವಾರ ರೇಜಿ ಎಂಬುವವರನ್ನ ಬಂಧಿಸಿದ್ದಾರೆ. ಎರ್ನಾಕುಲಂ ಜಿಲ್ಲೆಯ ಪೊಥಾನಿಕ್ಕಾಡ್ ಪಲ್ಲರಿಮಂಗಲಂ ಪಂಚಾಯತ್‌ನಲ್ಲಿ ಮಿನಿ ರಾಜು ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದರು.
1990ರ ಫೆ.21ರಂದು ಈ ಘಟನೆ ನಡೆದಿದ್ದು, ಮನೆಯೊಳಗೆ ಮರಿಯಮ್ಮ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಚಾಕುವಿನಿಂದ ಮರಿಯಮ್ಮ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಲಾಗಿತ್ತು. ಮರಿಯಮ್ಮ ಅವರ ಚಿನ್ನದ ಸರ ಕದ್ದ ಶಂಕಿತ ಆರೋಪಿತೆ, ಕಿವಿ ಕತ್ತರಿಸಿ ಕಿವಿಯೋಲೆ ಕಿತ್ತುಕೊಂಡಿದ್ದು, ಮರಿಯಮ್ಮಳಿಗೆ ಒಂಬತ್ತು ಬಾರಿ ಇರಿದಿದ್ದರು.
ಮರಿಯಮ್ಮನ ಸೇವಕಿ ಆಗಿದ್ದ ಹಾಗೂ ಸ್ವಂತ ಮಗಳೆಂದು ಪರಿಗಣಿತಳಾಗಿದ್ದ ರೇಜಿಯೇ ಮೇಲೆ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ನಂತರ ರೇಜಿಯನ್ನು ಬಂಧಿಸಿದ್ದರು. 1993 ರಲ್ಲಿ, ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅನುಮಾನದ ಲಾಭದ ಮೇಲೆ ರೇಜಿಯನ್ನು ದೋಷಮುಕ್ತಗೊಳಿಸಿತ್ತು. ನಂತರ 11 ಸೆಪ್ಟೆಂಬರ್ 1996 ರಂದು ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ರೇಜಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ ರೇಜಿ ತಲೆಮರೆಸಿಕೊಂಡಿದ್ದರು. ಆ ನಂತರ ತಮಿಳುನಾಡು, ದೆಹಲಿ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ರೇಜಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಅವರು ಪತ್ತೆಯಾಗಲಿಲ್ಲ. ನಂತರ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕೊಲೆಯಾದ 33 ವರ್ಷಗಳ ನಂತರ ಹಾಗೂ ಅಪರಾಧ ಸಾಬೀತಾದ 27 ವರ್ಷಗಳ ನಂತರ ಪ್ರಕರಣದ ಆರೋಪಿಗಳ ಬಂಧನಕ್ಕೆ ವಾರಂಟ್ ಹೊರಡಿಸಿತು.
ಕೋರ್ಟ್ ಹೊರಡಿಸಿದ್ದ ವಾರಂಟ್ ಹಿನ್ನೆಲೆಯಲ್ಲಿ ಚೆಂಗನ್ನೂರು ಡಿವೈಎಸ್ಪಿ ಎಂ.ಕೆ.ಬಿನುಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಮಾವೇಲಿಕ್ಕರ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಶ್ರೀಜಿತ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಉನ್ನಿಕೃಷ್ಣ ಪಿಳ್ಳೈ, ಮುಹಮ್ಮದ್ ಶಫೀಕ್ ಮತ್ತು ಅರುಣ್ ಭಾಸ್ಕರ್ ಈ ತಂಡದಲ್ಲಿದ್ದರು.
ತನಿಖಾ ತಂಡ ರೇಜಿಯ ಜಾಡು ಹಿಡಿದು ಶೋಧ ಕೈಗೊಂಡಿತ್ತು. ರೇಜಿ ತಲೆಮರೆಸಿಕೊಳ್ಳುವ ಮುನ್ನ ಮಿನಿ ಎಂಬ ಹೆಸರಿನಲ್ಲಿ ಕೊಟ್ಟಾಯಂ ಜಿಲ್ಲೆಯ ಹಲವೆಡೆ ಸೇವಕಿಯಾಗಿ ಕೆಲಸ ಮಾಡುತ್ತಿದ್ದು, ತಮಿಳುನಾಡಿನ ಕಟ್ಟಡ ಕಾರ್ಮಿಕರನ್ನು ಮದುವೆಯಾಗಿ ತಮಿಳುನಾಡಿಗೆ ತೆರಳಿದ್ದರು ಎಂಬ ಮಾಹಿತಿ ವಿಶೇಷ ತಂಡಕ್ಕೆ ಸಿಕ್ಕಿತ್ತು. ರೇಜಿ ತನ್ನ ಕುಟುಂಬದೊಂದಿಗೆ ಎರ್ನಾಕುಲಂ ಪೋತಾನಿಕ್ಕಾಡ್ ಪಲ್ಲರಿಮಂಗಲಂನಲ್ಲಿ ಮಿನಿ ರಾಜು ಎಂಬ ಹೆಸರಿನಲ್ಲಿ ನೆಲೆಸಿರುವುದನ್ನು ತಂಡ ಪತ್ತೆ ಹಚ್ಚಿತ್ತು. ಎಲ್ಲ ಮಾಹಿತಿ ಪಡೆದ ವಿಶೇಷ ತನಿಖಾ ತಂಡ ಅಂತಿಮವಾಗಿ ರೇಜಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.
ಇದನ್ನು ಓದಿ: Kidnap and Rape: ತಿರುವನಂತಪುರದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ.. ಆರೋಪಿಯ ಬಂಧನ