ಅಹಮದಾಬಾದ್ (ಗುಜರಾತ್): ಅಕ್ರಮವಾಗಿ ಅಮೆರಿಕ ತಲುಪಲು ಪ್ರಯತ್ನಿಸಿ ಇರಾನ್‌ನಲ್ಲಿ ಪಾಕಿಸ್ತಾನಿ ಏಜೆಂಟ್ ಒತ್ತೆಯಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ ಮೂಲದ ದಂಪತಿಯನ್ನು ಕೇಂದ್ರ ಸಚಿವ ಹರ್ಷ ಸಾಂಘ್ವಿ ಅವರು ರಾಜತಾಂತ್ರಿಕ ಮಾರ್ಗದ ಮೂಲಕ ಒತ್ತಡ ಹಾಕಿ ಬಿಡುಗಡೆಗೊಳಿಸದ ಘಟನೆ ನಡೆದಿದೆ.
ಗುಜರಾತ್ ಅಪರಾಧ ವಿಭಾಗ, ಕೇಂದ್ರ ವಿದೇಶಾಂಗ ಸಚಿವಾಲಯ, ರಾ, ಐಬಿ ಮತ್ತು ಇಂಟರ್‌ಪೋಲ್‌ನೊಂದಿಗೆ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ತೀವ್ರ ಪ್ರಯತ್ನ ನಡೆಸಿದ ನಂತರ ಇರಾನ್‌ನಲ್ಲಿ ಪಾಕಿಸ್ತಾನಿ ಏಜೆಂಟರ ವಶದಲ್ಲಿದ್ದ ಗುಜರಾತ್ ದಂಪತಿ ಬಿಡುಗಡೆಯಾಗಿದ್ದಾರೆ. ನವ ನರೋಡಾ ಮೂಲದ ಪಂಕಜ್ ಪಟೇಲ್ ಮತ್ತು ನಿಶಾ ಪಟೇಲ್ ದಂಪತಿ ಅಕ್ರಮವಾಗಿ ಅಮೆರಿಕ ತಲುಪಲು ಪ್ರಯತ್ನಿಸಿ ತೊಂದರೆಗೆ ಸಿಲುಕಿದ್ದರು ಎಂದು ತಿಳಿದುಬಂದಿದೆ.
ಪಾಕಿಸ್ತಾನಿ ಏಜೆಂಟ್ ಓರ್ವ ಈ ದಂಪತಿಯನ್ನು ಇರಾನ್‌ನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ನಂತರ ಬಿಡುಗಡೆಗೆ ದೊಡ್ಡ ಮೊತ್ತದ ಹಣಕ್ಕೆ ಕುಟುಂಬಸ್ಥರಿಗೆ ಬೇಡಿಕೆ ಇಟ್ಟಿದ್ದ. ಈ ಮಾಹಿತಿ ತಿಳಿದ ಸಚಿವ ಹರ್ಷ ಸಾಂಘ್ವಿ ಅವರು ವಾಟ್ಸಾಪ್ ಮೂಲಕ ಗೃಹ ಸಚಿವರಿಗೆ ಮಾಹಿತಿ ನೀಡಿ, ನಂತರ ದೇಶದ ವಿವಿಧ ಏಜೆನ್ಸಿಗಳನ್ನು ಸಂಪರ್ಕಿಸಿ 24 ಗಂಟೆಗಳಲ್ಲಿ ರಿಲೀಸ್ ಮಾಡಿಸಿದ್ದಾರೆ. ಕೆಲವು ದಿನಗಳ ಹಿಂದೆ ದಂಪತಿ ಟೆಹ್ರಾನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ, ಪಾಕಿಸ್ತಾನಿ ಏಜೆಂಟ್ ಇವರನ್ನು ಅಲ್ಲಿನ ಹೋಟೆಲ್‌ಗೆ ಕರೆದೊಯ್ದು ಸುಲಿಗೆಯ ಉದ್ದೇಶದಿಂದ ಒತ್ತೆಯಾಳಾಗಿ ಮಾಡಿಕೊಂಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್‌ನ ಯೋಗ ದಿನಾಚರಣೆ ಸೇರಿದಂತೆ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಯುತ್ತಿತ್ತು. ಆದರೆ, ಇದರ ನಡುವೆ ಭಾನುವಾರ ರಾತ್ರಿಯಿಂದ ಸೋಮವಾರ ತಡರಾತ್ರಿಯವರೆಗೂ ಸಚಿವರು ಈ ಪ್ರಕರಣದ ಕುರಿತು ಉಸ್ತುವಾರಿ ವಹಿಸಿಕೊಂಡಿದ್ದರು.
ಗುಜರಾತಿ ದಂಪತಿಯ ಪತ್ತೆಗೆ ಸಹಾಯ ಕೋರಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಡೆಪ್ಯೂಟಿ ಚೀಫ್ ಮಿಷನ್ ಜಾನ್ ಮಾಯ್ ಅವರನ್ನು ಸಂಪರ್ಕಿಸಲಾಯಿತು. ಕೇವಲ 24 ಗಂಟೆಗಳಲ್ಲಿ ವಿದೇಶಿ ನೆಲದಲ್ಲಿ ನಮಗೆ ಸಹಾಯ ಮಾಡಿದ ಸಚಿವ ಹರ್ಷ್ ಶಾಂಘ್ವಿ, ಅಹಮದಾಬಾದ್ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ನಮ್ಮ ಕುಟುಂಬವು ಕೃತಜ್ಞತೆ ವ್ಯಕ್ತಪಡಿಸುತ್ತದೆ. ನಮಗೆ ಆಗಿರುವಂತೆ ಯಾರಿಗೂ ಆಗಬಾರದು ಎಂದು ದಂಪತಿಯ ಕುಟುಂಬ ಸದಸ್ಯರಾದ ಸಂಕೇತ್ ಪಟೇಲ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಗಾಂಧಿನಗರದ ಸರ್ಗಾಸನ್‌ನಲ್ಲಿರುವ ಏಜೆಂಟ್ ಮೂಲಕ 1.15 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ದಂಪತಿ ಅಕ್ರಮವಾಗಿ ಅಮೆರಿಕಕ್ಕೆ ಹೋಗಲು ನಿರ್ಧರಿಸಿದ್ದರು. ಮೊದಲು ಹೈದರಾಬಾದ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮತ್ತೊಬ್ಬ ಏಜೆಂಟ್ ದುಬೈ, ಇರಾನ್ ಮೂಲಕ ಅಮೆರಿಕಕ್ಕೆ ಕಳುಹಿಸಬೇಕಿತ್ತು. ಹೀಗಿದ್ದರೂ ಅವರನ್ನು ಪಾಕಿಸ್ತಾನಿ ಏಜೆಂಟ್ ಇರಾನ್‌ನಲ್ಲಿ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದನು ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಸಿಗಾಳಿಗೆ 24 ಗಂಟೆಯಲ್ಲಿ 10 ಬಲಿ.. ನಾಲ್ಕು ದಿನಗಳಲ್ಲಿ 68ಕ್ಕೂ ಹೆಚ್ಚು ಸಾವು!