ಛತ್ತರ್ಪುರ (ಮಧ್ಯಪ್ರದೇಶ) : ಇತ್ತೀಚೆಗೆ ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ನಾಗರಿಕ ಸಮಾಜ ತಲೆ ತಗ್ಗಿಸುವ ಇಂಥ ಕೆಲಸಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಂಥದ್ದೇ ಮತ್ತೊಂದು ಘಟನೆ ಇದೇ ರಾಜ್ಯದಲ್ಲಿ ನಡೆದಿದೆ. ದಲಿತ ವ್ಯಕ್ತಿಯೋರ್ವ ತನ್ನನ್ನು ಸ್ಪರ್ಶಿಸಿದನೆಂದು ವ್ಯಕ್ತಿಯೋರ್ವ ಆತನ ಜಾತಿ ನಿಂದನೆ ಮಾಡಿ, ಮುಖ, ದೇಹದ ಮೇಲೆ ಮಲವನ್ನು ಎರಚಿರುವ ಘಟನೆ ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ. ನೊಂದ ದಲಿತ ವ್ಯಕ್ತಿ ಪೊಲೀಸ್ ಠಾಣೆ ದೂರು ನೀಡಿದ್ದಾರೆ.
ನಡೆದಿದ್ದೇನು?: ಸಂತ್ರಸ್ತ ದಶ್ರತ್ ಅಹಿರ್ವಾರ್ ಎಂಬವರು ನೀಡಿರುವ ದೂರಿನ ಪ್ರಕಾರ, ಕಳೆದ ಶುಕ್ರವಾರ ಘಟನೆ ನಡೆದಿದೆ. ದಶ್ರತ್ ಅವರು ಬಿಕೌರ ಗ್ರಾಮ ಪಂಚಾಯತ್ನಲ್ಲಿ ಚರಂಡಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಆರೋಪಿ ರಾಮ್ ಕ್ರಿಪಾಲ್ ಪಟೇಲ್ ಅವರು ಕೂಡಾ ಅಲ್ಲಿಯೇ ಇದ್ದ ಪಂಪ್ ಬಳಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ದಶ್ರತ್ ಅವರ ಗ್ರೀಸ್ ಅಂಟಿಕೊಂಡಿದ್ದ ಕೈ ರಾಮ್ ಕ್ರಿಪಾಲ್ ಪಟೇಲ್ಗೆ ತಾಗಿದೆ. ಇದರಿಂದ ಕೋಪಗೊಂಡ ಪಟೇಲ್ ದಶ್ರತ್ ಮೇಲೆ ಅಲ್ಲಿಯೇ ಇದ್ದ ಚೊಂಬಿನಲ್ಲಿ ಮಲವನ್ನು ತುಂಬಿಸಿಕೊಂಡು ಬಂದು ಮುಖ ಮತ್ತು ದೇಹದ ಮೇಲೆ ಎರಚಿದ್ದಾರೆ ಎಂದು ಆರೋಪಿಸಿದ್ದಾರೆ. ಪಟೇಲ್ ಜಾತಿ ನಿಂದನೆ ಮಾಡಿರುವುದಾಗಿ ದೂರಿದ್ದಾರೆ.
"ಈ ಬಗ್ಗೆ ಪಂಚಾಯತಿಗೆ ದೂರು ಸಲ್ಲಿಸಿದ್ದೆ. ಅಲ್ಲಿ ಅವರು ಸಭೆ ಕರೆದಿದ್ದರು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನ್ನ ವಿರುದ್ಧವೇ ಕ್ರಮ ಕೈಗೊಂಡರು. ನನಗೆ 600 ರೂ ದಂಡ ವಿಧಿಸಿದರು" ಎಂದು ದಶ್ರತ್ ಹೇಳಿದರು. ಶನಿವಾರ ಬಂದು ಮಹಾರಾಜ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದ್ದಾರೆ. ಆರೋಪಿ ರಾಮ್ ಕ್ರಿಪಾಲ್ ಪಟೇಲ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 294 ಮತ್ತು 506 ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, "ದಶ್ರತ್ ಅವರು ಪಟೇಲ್ ಮತ್ತು ಇತರರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಪರಸ್ಪರ ತಮಾಷೆ ಮಾಡಿಕೊಂಡು ಕಾಲೆಳೆಯುತ್ತಿದ್ದರು. ಈ ಸಂದರ್ಭದಲ್ಲಿ ದಶ್ರತ್ ಅವರ ಕೈ ಪಟೇಲ್ ಅವರಿಗೆ ತಾಗಿದೆ. ಕುಪಿತಗೊಂಡ ಪಟೇಲ್ ಮಲವನ್ನು ತಂದು ದಶ್ರತ್ ಅವರ ತಲೆ, ಮುಖ ಮತ್ತು ದೇಹದ ಮೇಲೆ ಎಸೆದಿದ್ದಾರೆ. ದಶ್ರತ್ ಅವರು ಶನಿವಾರ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ರಾಮ್ಕ್ರಿಪಾಲ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿದೆ, ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ : Man Urinating: ಬುಡಕಟ್ಟು ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ