ಮುಂಬೈ: ಮಾದಕ ವಸ್ತು ಜಾಲದೊಂದಿಗೆ ನಂಟು ಆರೋಪದಡಿ ಎನ್ಸಿಬಿಯಿಂದ ಬಂಧಿತನಾಗಿರಾಗಿದ್ದ ಬಾಲಿವುಡ್ನ ಹಾಸ್ಯನಟಿ ಭಾರತಿಸಿಂಗ್ ಹಾಗೂ ಆಕೆಯ ಪತಿ ಹರ್ಷ್ ಲಿಂಬಾಚಿಯಾಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.
ಭಾನುವಾರಷ್ಟೇ ಕೋರ್ಟ್ ಭಾರತಿ ಸಿಂಗ್ ಹಾಗೂ ಆಕೆಯ ಪತಿಯನ್ನು ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಇದಾದ ನಂತರ ಆರೋಪಿಗಳ ಪರ ವಕೀಲ ಅಯಾಜ್ ಖಾನ್ ಮೂಲಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿದೆ.
ಬಾಲಿವುಡ್ನಲ್ಲಿ ಡ್ರಗ್ಸ್ ಸೇವನೆ ಮತ್ತು ನಂಟು ಆರೋಪದಡಿ ಎನ್‌ಸಿಬಿ ಅಧಿಕಾರಿಗಳು ನವೆಂಬರ್ 21ರಂದು ನಟಿ ಭಾರತಿ ಸಿಂಗ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ಈ ವೇಳೆ 80 ಗ್ರಾಮ್ಗೂ ಹೆಚ್ಚು ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತಿ ಸಿಂಗ್ ಹಾಗೂ ಆಕೆಯ ಪತಿಯನ್ನು ಬಂಧಿಸಲಾಗಿತ್ತು.
ಇದಾದ ನಂತರ ಎನ್‌ಸಿಬಿ ವಿಚಾರಣೆ ನಡೆಸಿದಾಗ ಅವರಿಬ್ಬರೂ ಗಾಂಜಾ ಸೇವನೆ ಮಾಡ್ತಿರೋದನ್ನು ಒಪ್ಪಿಕೊಂಡಿದ್ದಾರೆ ಎಂದು ಎನ್‌ಸಿಬಿ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿತ್ತು. ಭಾನುವಾರ ಅವರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.