ನವದೆಹಲಿ: ಅಕ್ಟೋಬರ್ 30ರಂದು ನಡೆದಿದ್ದ 13 ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಸೇರಿ 3 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
ಅಸ್ಸೋಂ:
ಅಸ್ಸೋಂನಲ್ಲಿ ಐದು, ಪಶ್ಚಿಮ ಬಂಗಾಳದ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಮೂರು, ಬಿಹಾರ, ರಾಜಸ್ಥಾನದಲ್ಲಿ ತಲಾ ಎರಡು, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ ಮಿಜೋರಾಂನಲ್ಲಿ ತಲಾ 1 ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಜೊತೆಗೆ ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಹಾಗೂ ಮಧ್ಯಪ್ರದೇಶದ ಖಾಂಡ್ವಾ ಮೂರು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.
ಪಶ್ಚಿಮ ಬಂಗಾಳ:
ಪಶ್ಚಿಮ ಬಂಗಾಳದ 4 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತೆ ಎಣಿಕೆ ಆರಂಭಗೊಂಡಿದ್ದು, ದಿನ್ಹಾತ್, ಶಾರದ, ಗೋಸಬಾ ಮತ್ತು ಶಾಂತಿಪುರ್ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಆರಂಭಿಕ ಮತಎಣಿಕೆಯ ಬಳಿಕ ಈ ನಾಲ್ಕು ಕ್ಷೇತ್ರಗಲ್ಲಿ ಟಿಎಂಸಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ತಜ್ಞರ ಪ್ರಕಾರ 4 ಕ್ಷೇತ್ರಗಳಲ್ಲಿ ಟಿಎಂಸಿ ಜಯ ದಾಖಲಿಸಲಿದ್ದು, ಈ ಮೂಲಕ ಪಕ್ಷವು 223 ಕ್ಷೇತ್ರ ಗೆದ್ದಂತಾದರೆ ಬಿಜೆಪಿ 70ಕ್ಕೆ ಕುಸಿಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ತೆಲಂಗಾಣ:
ತೆಲಂಗಾಣದ ಹುಜುರಾಬಾದ್ನ ಉಪಚುನಾವಣೆ ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಇಟೆಲಾ ರಾಜೇಂದ್ರ 358 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಟಿಆರ್ಎಸ್ ಅಭ್ಯರ್ಥಿ 9,103 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು 22 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಕುತೂಹಲ ಮೂಡಿಸಿದೆ. ಇತ್ತ ಆಂಧ್ರದ ಬದ್ವೇಲು ಉಪಚುನಾಣೆಯಲ್ಲಿ ವೈಎಸ್ಆರ್ಸಿಪಿಯ ದಾಸರಿ ಸುಧಾ ಗೆಲುವು ಸಾಧಿಸಿದ್ದಾರೆ. ಒಟ್ಟು 1,06,088 ಮತ ಪಡೆದು ದಾಖಲೆಯ ಗೆಲುವು ಪಡೆದಿದ್ದಾರೆ.
ಬಿಹಾರ:
ಇತ್ತ ಬಿಹಾರದ 5 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 2ನೇ ಸುತ್ತಿನ ಮತ ಎಣಿಕೆಯಲ್ಲಿ ಮೂರು ಸ್ಥಾನದಲ್ಲಿ ಬಿಜೆಪಿ ಹಾಗೂ ಇನ್ನೆರಡು ಸ್ಥಾನಗಳಲ್ಲಿ ಯುಪಿಪಿಎಲ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರ ಮತ್ತು ಇತರ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಅಸ್ಸೋಂನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಸ್ಸೋಂನ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಹರಿಯಾಣ:
ಹರಿಯಾಣದ ಎಲೆನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಐಎನ್‌ಎಲ್‌ಡಿ ಪ್ರಧಾನ ಕಾರ್ಯದರ್ಶಿ ಅಭಯ್ ಸಿಂಗ್ ಚೌಟಾಲಾ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಐಎನ್‌ಎಲ್‌ಡಿ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ.