ಪುಣೆ (ಮಹಾರಾಷ್ಟ್ರ): ನವರಾತ್ರಿ ಹಬ್ಬದ ನಿಮಿತ್ತ 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪೂಜೆಗಳು ಆಯೋಜಿಸುವ ಸಾಮಾನ್ಯ. ಆದರೆ, ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿಯಾದ ಪುಣೆಯಲ್ಲಿ ನವರಾತ್ರಿ ಸಂದರ್ಭದಲ್ಲೇ ಮೂರು ದಿನಗಳ ಸೆಕ್ಸ್ ತಂತ್ರ ಶಿಬಿರ ಆಯೋಜಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಈ ಶಿಬಿರದ ಆಯೋಜಕರ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸತ್ಯಂ ಶಿವಂ ಸುಂದರಂ ಪ್ರತಿಷ್ಠಾನವು ಅಕ್ಟೋಬರ್ 1ರಿಂದ 3ರವರೆಗೆ ಸೆಕ್ಸ್ ತಂತ್ರ ಎಂಬ ಶಿಬಿರವನ್ನು ಆಯೋಜಿಸಿದೆ. ಇದಕ್ಕೆ ಆನ್‌ಲೈನ್ ಬುಕ್ಕಿಂಗ್ ಇದ್ದು, ಈ ಕುರಿತ ಜಾಹೀರಾತು ಪೋಸ್ಟರ್ ವೈರಲ್ ಆಗಿದೆ. ಮೂರು ದಿನ ಹಾಗೂ ಎರಡು ರಾತ್ರಿ ನಡೆಯುವ ಶಿಬಿರಕ್ಕೆ ಪ್ರತಿ ವ್ಯಕ್ತಿಗೂ ವಸತಿ ಮತ್ತು ಊಟದೊಂದಿಗೆ 15 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಈ ಶಿಬಿರದಲ್ಲಿ ಕಾಮಸೂತ್ರದಲ್ಲಿನ ಧ್ಯಾನ ಮತ್ತು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಈ ಶಿಬಿರದ ಜಾಹೀರಾತು ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮಹಿಳಾ ಘಟಕ ಹಾಗೂ ಹಿಂದೂ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ, ಈ ಬಗ್ಗೆ ಪುಣೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಶಿಬಿರವನ್ನು ಆಯೋಜಿಸಿರುವ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಎನ್‌ಎಸ್ ಮಹಿಳಾ ಮೋರ್ಚಾ ಆಗ್ರಹಿಸಿದೆ.
ಅಲ್ಲದೇ, ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಎಂಎನ್ಎಸ್ ತನ್ನದೇ ಶೈಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಮಹಿಳಾ ಘಟಕದ ನಗರಾಧ್ಯಕ್ಷೆ ವನಿತಾ ವಾಗಾಸ್ಕರ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಿಂದೂ ಮಹಾಸಭಾ ಹಾಗೂ ಇತರ ಹಿಂದೂ ಸಂಘಟನೆಗಳು ಈ ಶಿಬಿರದ ಜಾಹೀರಾತು ಪ್ರತಿಯನ್ನು ಹರಿದು ಹಾಕಿದು ತೀವ್ರ ಆಕ್ರೋಶ ಹೊರಹಾಕಿವೆ.
ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ: ಗರ್ಭಿಣಿಯಾಗ್ತಿದ್ದಂತೆ ಬೆಳಕಿಗೆ ಬಂದ ಪ್ರಕರಣ