ಲಖನೌ(ಉತ್ತರಪ್ರದೇಶ): ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯ ನಿರ್ಮಾಣ ಕಾರ್ಯ 2024ರ ಮೇ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಈ ಮೊದಲು ನಿರ್ಧರಿಸಿದ ಮಸೀದಿ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೀಗಾಗಿ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ತಿಳಿಸಿದೆ.
ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಮುಂದಿನ ವರ್ಷದ ಜನವರಿ 22ರಂದು ಉದ್ಘಾಟನೆ ಸಮಾರಂಭ ನಡೆಯಲಿದೆ. ಇದರ ಬಳಿಕ ಮಸೀದಿ ನಿರ್ಮಾಣ ಕಾರ್ಯ ತ್ವರಿತಗೊಳಿಸಲಾಗುವುದು ಎಂದು ಟ್ರಸ್ಟ್ನ ಮೂಲಗಳು ಹೇಳಿವೆ.
ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿಯೇ ಮಸೀದಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಧನ್ನಿಪುರ ಎಂಬಲ್ಲಿ ಮಸೀದಿಯನ್ನು ನಿರ್ಮಿಸುವ ಯೋಜನೆಯನ್ನು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಹಾಕಿಕೊಂಡಿದೆ. ಫೆಬ್ರವರಿಯಿಂದ ನಿಧಿ ಸಂಗ್ರಹಿಸಲು ಉದ್ದೇಶಿಸಲಾಗಿದೆ.
ಫೆಬ್ರವರಿಯಲ್ಲಿ ವಿನ್ಯಾಸ ಪೂರ್ಣ: ಮಸೀದಿಯ ಅಂತಿಮ ವಿನ್ಯಾಸವು ಫೆಬ್ರವರಿಯಲ್ಲಿ ಅಂತಿಮವಾಗಲಿದೆ. ನಂತರ ಅದಕ್ಕೆ ಆಡಳಿತಾತ್ಮಕ ಅನುಮೋದನೆಗೆ ಪಡೆದುಕೊಳ್ಳಬೇಕು. ಮೇ ತಿಂಗಳಲ್ಲಿ ಮಸೀದಿಯ ನಿರ್ಮಾಣ ಪ್ರಾರಂಭಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಮುಖ್ಯ ಟ್ರಸ್ಟಿ, ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷರೂ ಆಗಿರುವ ಜುಫರ್ ಫಾರೂಕಿ ತಿಳಿಸಿದರು.
ನೂತನ ಮಸೀದಿಗೆ ಮೊಹಮ್ಮದ್ ಬಿನ್ ಅಬ್ದುಲ್ಲಾ ಎಂದು ಹೆಸರಿಸಲಾಗುತ್ತದೆ. ಈ ಹಿಂದಿನ ವಿನ್ಯಾಸದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಹಣಕಾಸಿನ ಸಮಸ್ಯೆ ಉಂಟಾದ ಕಾರಣ ಮಸೀದಿಯ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಫಾರೂಕಿ ಹೇಳಿದರು.
ಮಸೀದಿಯ ಆರಂಭಿಕ ವಿನ್ಯಾಸವು ಭಾರತದಲ್ಲಿನ ಕಟ್ಟಡಗಳನ್ನು ಆಧರಿಸಿತ್ತು. ಅದು ತಿರಸ್ಕೃತವಾಗಿದೆ. 15,000 ಚದರ ಅಡಿಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಈಗ 40,000 ಚದರ ಅಡಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು. ಮಧ್ಯಪ್ರಾಚ್ಯ ದೇಶಗಳಲ್ಲಿ ಅಳವಡಿಸಿಕೊಂಡಿರುವ 'ಗ್ರ್ಯಾಂಡ್' ವಿನ್ಯಾಸವನ್ನು ಇಲ್ಲಿ ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.
ಅಗತ್ಯ ಬಿದ್ದರೆ ಜನರಿಂದ ದೇಣಿಗೆ ಸಂಗ್ರಹ: ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಜನರಿಂದ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನೂ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಫೆಬ್ರವರಿಯೊಳಗೆ ಟ್ರಸ್ಟ್ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ದೇಣಿಗೆ ಸಂಗ್ರಹ ದೊಡ್ಡ ಸವಾಲು. ಅದರಲ್ಲಿ ಪಾರದರ್ಶಕತೆ ಕಾಪಾಡಲಾಗುವುದು. ದೇಣಿಗೆ ನೀಡಲು ಸಿದ್ಧರಿರುವ ಜನರಿಂದ ಆನ್‌ಲೈನ್ ದೇಣಿಗೆಯನ್ನು ಪಡೆಯಲಾಗುವುದು ಎಂದು ಹೇಳಿದರು.
ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಮಾತನಾಡಿ, ಟ್ರಸ್ಟ್ ವತಿಯಿಂದ ಸರ್ಕಾರ ನೀಡಿದ ಜಾಗದಲ್ಲಿ ಮಸೀದಿ ಜತೆಗೆ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆ ಕೋಣೆ, ಮ್ಯೂಸಿಯಂ, ಸಂಶೋಧನಾ ಸಂಸ್ಥೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ತಾಜ್ ಮಹಲ್‌ಗಿಂತಲೂ ಸುಂದರವಾದ ದೇಶದ ಅತಿ ದೊಡ್ಡ ಮಸೀದಿ