ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಮೊದಲು ಜೂ. 8ರಂದು ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿಗೆ ಜೂ. 13ರಂದು ಫೆಡರಲ್ ಏಜೆನ್ಸಿಯ ಎದುರು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.
ಈ ಹಿನ್ನೆಲೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ ಮತ್ತಿತರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಕಾಂಗ್ರೆಸ್ ತಂತ್ರ: ಜಾರಿ ನಿರ್ದೇಶನಾಲಯವು ರಾಹುಲ್ ಹಾಗೂ ಸೋನಿಯಾಗಾಂಧಿ ಅವರಿಗೆ ನಿರಂತರ ನೋಟಿಸ್‌ಗಳನ್ನು ನೀಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೇಶದ ಇಡಿ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ನಡೆಸಲು ತಯಾರಿ ನಡೆಸುತ್ತಿದೆ. ದೆಹಲಿಯಿಂದ ಉತ್ತರ ಪ್ರದೇಶ ಮತ್ತು ದಕ್ಷಿಣದ ಕೇರಳ ಮತ್ತು ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸುದ್ದಿಗೋಷ್ಠಿಯ ಜವಾಬ್ದಾರಿಯನ್ನು ಪಕ್ಷದ ಎಲ್ಲಾ ನಾಯಕರಿಗೆ ವಹಿಸಲಾಗಿದೆ.
ಕೇಂದ್ರದ ವಿರುದ್ಧ ವಾಗ್ದಾಳಿ: ದೆಹಲಿಯಲ್ಲಿ ಹಲವು ಪಕ್ಷದ ಮುಖಂಡರು ರಾಹುಲ್ ಗಾಂಧಿ ಅವರೊಂದಿಗೆ ಇಡಿ ಕಚೇರಿಗೆ ಮೆರವಣಿಗೆ ನಡೆಸಲಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಮುಖ್ಯಮಂತ್ರಿಗಳಾದ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢದ ಭೂಪೇಶ್ ಬಘೇಲ್ ಅವರು ಪಕ್ಷದ ನಾಯಕ ರಾಹುಲ್ ಗಾಂಧಿಯೊಂದಿಗೆ ಇಡಿ ಕಚೇರಿಗೆ ಮೆರವಣಿಗೆ ನಡೆಸಲಿದ್ದಾರೆ.
ಕಾಂಗ್ರೆಸ್ ಸೋಮವಾರ ಶಕ್ತಿ ಪ್ರದರ್ಶನಕ್ಕೆ ಕರೆ ನೀಡಿದೆ."ಎಐಸಿಸಿಯಿಂದ ನಾವೆಲ್ಲರೂ ರಾಹುಲ್ ಗಾಂಧಿಯೊಂದಿಗೆ ಇಡಿ ಕಚೇರಿಗೆ ಹೋಗುತ್ತೇವೆ. ಸರ್ಕಾರ ಇಡಿ, ಸಿಬಿಐ ಮತ್ತು ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ." ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಡಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತೀವ್ರ ವಾಗ್ದಾಳಿ ನಡೆಸಿದರು.
ಧ್ವನಿ ಅಡಗಿಸುವ ಹುನ್ನಾರ: ಕಾಂಗ್ರೆಸ್ ಬಿಜೆಪಿ ಪ್ರಚೋದಿತ ದ್ವೇಷದ ವಿರುದ್ಧ ಧ್ವನಿ ಎತ್ತುತ್ತಿದೆ. ಈಗ ಈ ಧ್ವನಿಯನ್ನು ಅಡಗಿಸಲು ಇಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ವಿರೋಧದ ಧ್ವನಿಯನ್ನು ಅಡಗಿಸಲು ಇಡಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ಯನ್ನು ಬಳಸುತ್ತಿದ್ದಾರೆ. ಆದರೆ, ದ್ವೇಷದ ವಿರುದ್ಧ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹೋರಾಟ ಮುಂದುವರಿಯುತ್ತದೆ. ಸತ್ಯವನ್ನು ಹೆಚ್ಚು ಕಾಲ ಮರೆಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ಯಾವಾಗಲೂ ಅದಕ್ಕಾಗಿ ಹೋರಾಡುತ್ತೇವೆ ಎಂದು ಪಕ್ಷ ಹೇಳಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾಹುಲ್ ಗಾಂಧಿ ಮತ್ತು ಜೂ.23 ರಂದು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಗೆ ಸಮನ್ಸ್ ಪಡೆದಿರುವ ಸೋನಿಯಾ ಗಾಂಧಿ ಅವರು ಜೂ.23 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಜೂ.2 ರಂದು ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಅವರು ಈ ಹಿಂದಿನ ಸಮನ್ಸ್‌ಗಳಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ.
ಏನಿದು ಪ್ರಕರಣ?: ನ್ಯಾಷನಲ್ ಹೆರಾಲ್ಡ್ ಪ್ರಕರಣವು ಜವಾಹರಲಾಲ್ ನೆಹರು ಸ್ಥಾಪಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕುರಿತಾಗಿದೆ. ಇದರ ಮಾಲೀಕತ್ವವನ್ನು ಹೊಂದಿರುವ ಪಕ್ಷ - ಪ್ರಚಾರದ ಯಂಗ್ ಇಂಡಿಯನ್‌ನಲ್ಲಿನ ಹಣಕಾಸಿನ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಯುತ್ತಿದೆ. ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸಿದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ.
ಕಾಂಗ್ರೆಸ್ ರ‍್ಯಾಲಿಗೆ ಇಲ್ಲ ಅನುಮತಿ: ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಸೇರಿದಂತೆ ಕೆಲವು ಕಾರಣಗಳನ್ನು ಉಲ್ಲೇಖಿಸಿ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಕಚೇರಿವರೆಗೆ ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್ ರ‍್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ಪ್ರಸ್ತುತ ಕೋಮು ಪರಿಸ್ಥಿತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು, ಹೊಸದಿಲ್ಲಿ ವ್ಯಾಪ್ತಿಯಲ್ಲಿ ರ‍್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಅಮೃತ ಗುಗುಲೋತ್ ಹೇಳಿದರು.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ ಗಾಂಧಿ, ಪುತ್ರ ರಾಹುಲ್ಗೆ ಸಮನ್ಸ್