ನವದೆಹಲಿ: ಪಂಚರಾಜ್ಯ ಚುನಾವಣೆ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಗ್ಗೆ ಮತ್ತೊಮ್ಮೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ಬಣ G-23 ಮುಖಂಡರು ಮೇಲಿಂದ ಮೇಲೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಸಂಜೆ G-23ಯ ಗುಲಾಂ ನಬಿ ಆಜಾದ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಗುಲಾಂ ನಬಿ ಆಜಾದ್, ಇದೊಂದು ಉತ್ತಮ ಸಭೆಯಾಗಿತ್ತು. ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ತಯಾರಿ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದ್ದು, ನಾಯಕತ್ವದ ಪ್ರಶ್ನೆ ಉಂಟಾಗಿಲ್ಲ. ಕಾಂಗ್ರೆಸ್ ಒಂದೇ ಪಕ್ಷವಾಗಿದ್ದು, ಒಬ್ಬರೇ ಅಧ್ಯಕ್ಷರು ಎಂದರು. ಸೋನಿಯಾ ಗಾಂಧಿ ಅವರ ರಾಜೀನಾಮೆಯನ್ನು ಯಾರೂ ಸಹ ಕೇಳಿಲ್ಲ. ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದರು.
ಪಂಚರಾಜ್ಯಗಳ ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ಸಲಹೆ ನೀಡಲು ಕಾರ್ಯಕಾರಿ ಸಮಿತಿ ಕೇಳಿದೆ. ವಿರೋಧ ಪಕ್ಷಗಳ ಸೋಲಿಸಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದೇವೆ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನೊಳಗೊಂಡ ಸಾಮೂಹಿಕ ನಾಯಕತ್ವಕ್ಕೆ ಜಿ-23 ಮುಖಂಡರು ಧ್ವನಿ ಎತ್ತಿದ ಬೆನ್ನಲ್ಲೇ ಸೋನಿಯಾ ಗಾಂಧಿ ಜೊತೆಗಿನ ಗುಲಾಂ ನಬಿ ಆಜಾದ್ ಭೇಟಿ ಮಹತ್ವ ಪಡೆದುಕೊಂಡಿತ್ತು. ಭಿನ್ನಮತೀಯ ತಂಡದಲ್ಲಿ ಕಾಣಿಸಿಕೊಂಡಿದ್ದ ಭೂಪೇಂದ್ರ ಸಿಂಗ್ ಹೂಡಾ ಕೂಡ ಗುರುವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು.