ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿರುವ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಯವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದರು. ಅಧೀರ್ ರಂಜನ್ ಅವರ ಈ ಮಾತಿಗೆ ಪ್ರತಿಪಕ್ಷ ಬಿಜೆಪಿ ಸೇರಿದಂತೆ ರಾಜಕೀಯ ವಲಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಅಪಮಾನಿಸುವುದರ ಅರಿವು ಇಟ್ಟುಕೊಂಡೇ ಎ.ಆರ್.ಚೌಧರಿ ಅವರು ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಬುಡಕಟ್ಟು ವಿರೋಧಿ, ದಲಿತ ಮತ್ತು ಮಹಿಳಾ ವಿರೋಧಿಯಾಗಿದೆ ಎಂಬುದು ದೇಶಕ್ಕೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಧೀರ್ ರಂಜನ್ ಈ ಕೂಡಲೇ ಕ್ರಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಕರೆದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ತಪ್ಪಿಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯಿಸಿದ್ದಾರೆ.
'ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ': ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ತಪ್ಪಾಗಿ ಉಲ್ಲೇಖಿಸಿದ್ದು, ಅದಕ್ಕಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಬಿಜೆಪಿ ಉದ್ದೇಶಪೂರ್ವಕವಾಗಿ ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡುತ್ತಿದೆ ಎಂದರು.
'ಕ್ಷಮೆ ಕೇಳಿದ್ದಾರೆ'!: ಈ ಮಧ್ಯೆ, 'ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ' ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಅಧೀರ್ ರಂಜನ್ ಚೌಧರಿಗೆ ಕ್ಷಮೆ ಯಾಚಿಸುವಂತೆ ನೀವು ಸೂಚಿಸುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸೋನಿಯಾ, ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದಷ್ಟೇ ಉತ್ತರಿಸಿದರು.
ಮತ್ತೆ ಮೂವರು ಸಂಸದರ ಅಮಾನತು: ಈಗಾಗಲೇ ರಾಜ್ಯಸಭೆಯ 19 ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ. ಇಂದು ಮತ್ತೆ ಮೂವರು ರಾಜ್ಯಸಭೆ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಅಮಾನತುಗೊಂಡ ಸಂಸದರ ಧರಣಿ: ಆರೋಗ್ಯ ಸಚಿವರಿಗೆ 'ಸಂಸತ್ತಿನ ಸೊಳ್ಳೆ ಕಥೆ' ಹೇಳಿದ ಟ್ಯಾಗೋರ್