ನವದೆಹಲಿ: ಆರು ರಾಜ್ಯಗಳಲ್ಲಿ ನಡೆದ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದೆ. ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ಗೆ ಒಂದೂ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅದರಲ್ಲೂ ತೆಲಂಗಾಣ ಮತ್ತು ಹರಿಯಾಣದಲ್ಲಿ ತಲಾ ಒಂದರಂತೆ ತನ್ನ ಎರಡು ಸ್ಥಾನಗಳನ್ನೂ ಕಳೆದುಕೊಂಡಿದೆ.
ಏಳು ಕ್ಷೇತ್ರಗಳ ಪೈಕಿ ಬಿಜೆಪಿ 4 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆರ್‌ಜೆಡಿ, ಟಿಆರ್‌ಎಸ್ ಮತ್ತು ಉಧವ್ ಠಾಕ್ರೆ ಅವರ ಶಿವಸೇನೆ ಬಣ ತಲಾ ಒಂದು ಸ್ಥಾನ ಗೆದ್ದಿದೆ. ಆದರೆ, ಈ ಹಿಂದೆ ಗೆದ್ದಿದ್ದ ಹರಿಯಾಣದ ಆದಂಪುರ ಹಾಗೂ ತೆಲಂಗಾಣದ ಮುನುಗೋಡು ಕ್ಷೇತ್ರವನ್ನು ಕಾಂಗ್ರೆಸ್ ಕೈ ಚೆಲ್ಲಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರು. ಇದರಿಂದ ಉಪಚುನಾವಣೆ ನಡೆದಿತ್ತು. ಆದರೆ, ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹರಿಯಾಣದ ಆದಂಪುರದಲ್ಲಿ ಬಿಜೆಪಿ ಹಾಗೂ ತೆಲಂಗಾಣದ ಮುನುಗೋಡು ಕ್ಷೇತ್ರದಲ್ಲಿ ಟಿಆರ್‌ಎಸ್ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಉಪ ಚುನಾವಣೆಯಲ್ಲಿ 4 ಕ್ಷೇತ್ರ ಗೆದ್ದ ಬಿಜೆಪಿ: ಆರ್‌ಜೆಡಿ, ಟಿಆರ್‌ಎಸ್, ಠಾಕ್ರೆ ಬಣಕ್ಕೂ ಗೆಲುವಿನ ಸಿಹಿ