ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ ಸಂದರ್ಭ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಟ್ವೀಟ್ ಮಾಡಿರುವ ಕಾಂಗ್ರೆಸ್, ಇಷ್ಟು ದಿನ ಲಸಿಕೆ ಕೊರತೆ ಇತ್ತು, ಜನತೆ ಲಸಿಕೆ ಸಿಗದೆ ಪರದಾಡುತ್ತಿದ್ದರು, ಇಂದು ಏಕಾಏಕಿ ಎಲ್ಲೆಡೆ ಲಸಿಕೆಗಳನ್ನು ವ್ಯಾಪಕವಾಗಿ ನೀಡಲಾಗಿದೆ, ಇಷ್ಟು ದಿನ ಸರ್ಕಾರವೇ ಕೃತಕ ಅಭಾವ ಸೃಷ್ಟಿಸಿ 'ವ್ಯಾಕ್ಸಿನ್ ಬ್ಲಾಕಿಂಗ್' ಮಾಡಿದ್ದು ಸ್ಪಷ್ಟ. ಕ್ರೂರ ಮನಸ್ಥಿತಿಯ ಬಿಜೆಪಿ ಜನರನ್ನು ಗೋಳಾಡಿಸಿ ಲಸಿಕೆಗಳನ್ನೂ ಪ್ರಚಾರದ 'ಇವೆಂಟ್'ಗೆ ಬಳಸಿಕೊಂಡಿದೆ ಎಂದಿದೆ.
50,000 ಜನರು ಪ್ರತಿದಿನ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಮೋದಿಯವರ ಕೆಟ್ಟ ನೀತಿಗಳಿಂದಾಗಿ ನಿರುದ್ಯೋಗ ಈ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ರಾಷ್ಟ್ರೀಯ ನಿರುದ್ಯೋಗ ದಿನದಂದು ಮೋದಿ ಸರ್ಕಾರದ ಕೆಟ್ಟ ನೀತಿಗಳ ವಿರುದ್ಧ ಧ್ವನಿ ಎತ್ತಬೇಕಿದೆ. ರಾಷ್ಟ್ರೀಯ ನಿರುದ್ಯೋಗ ದಿನ ಮೋದಿ ಸರ್ಕಾರದ ದ್ರೋಹಗಳನ್ನು ಪ್ರಶ್ನಿಸೋಣ ಎಂದಿದೆ.
1 ಲಕ್ಷ ಅಲ್ಲ, 2 ಲಕ್ಷ ಅಲ್ಲ, 3 ಲಕ್ಷ ಅಲ್ಲ, ಬರೋಬ್ಬರಿ 13 ಲಕ್ಷ ಗ್ರಾಮೀಣ ಭಾರತೀಯರು ತಮ್ಮ ಉದ್ಯೋಗ ಕಳೆದುಕೊಂಡರು. ಚುನಾವಣಾ ಭಾಷಣಗಳಲ್ಲಿ ಕೋಟಿ - ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದವರು ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ದೇಶದ ಪ್ರಧಾನಿಯೇ ಯುವಜನತೆಗೆ ಪಕೋಡ ಮಾರಲು ಸಲಹೆ ನೀಡಿ, ಅವರ ಭವಿಷ್ಯವನ್ನು ಕತ್ತಲೆಗೆ ತಳ್ಳಿದ್ದಾರೆ. ಉದ್ಯೋಗ, ವಿಕಾಸ, ಅಚ್ಚೇ ದಿನ ಎಲ್ಲವೂ ಮಾಯ. ಉದ್ಯೋಗ ಸೃಷ್ಟಿಯ ಪ್ರಶ್ನೆಗೆ ಯುವಕರು ಪಕೋಡಾ ಮಾರುತ್ತಿಲ್ಲವೇ ಎಂದು ಕೇಳಿದ ಜಗತ್ತಿನ ಏಕೈಕ ಪ್ರಧಾನಿ ನರೇಂದ್ರ ಮೋದಿ! ಇದು ಬೇಜವಾಬ್ದಾರಿತನ ಹಾಗೂ ಮೂರ್ಖತನದ ಪರಮಾವಧಿ ಎಂದಿದೆ.
ಗ್ಯಾಸ್, ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ, ದೇಶವನ್ನು ಪಕೋಡಾ ಮಾಡಲೂ ಆಗದ ಸ್ಥಿತಿಗೆ ತಂದಿಟ್ಟಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅಧಿಕಾರ ಹಿಡಿದ ಪ್ರಧಾನಿ ಮೋದಿಯವರು ಸೃಷ್ಟಿಸಿದ್ದು ಐತಿಹಾಸಿಕ ನಿರುದ್ಯೋಗ. ತಾವೇನೋ ದುಡಿಯಲಾರದ ಸೋಂಬೇರಿತನದಲ್ಲಿ ಸ್ವಾಭಿಮಾನ ಮರೆತು ಭಿಕ್ಷೆ ಬೇಡಿರಬಹುದು, ಆದರೆ ದೇಶದ ಸ್ವಾಭಿಮಾನಿ ಯುವಜನತೆ ಭಿಕ್ಷೆ ಬೇಡಲಾರರು! ಬದುಕಲು ಜನತೆಗೆ ಉದ್ಯೋಗ ಬೇಕಿದೆ ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.
ಇದನ್ನು ಓದಿ:ದೇಶಾದ್ಯಂತ 2.25 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಣೆ: ಮೋದಿ ಜನ್ಮದಿನದಂದು ಐತಿಹಾಸಿಕ ದಾಖಲೆ