ಬರೇಲಿ(ಉತ್ತರ ಪ್ರದೇಶ): ತನ್ನ ಮೇಲೆ ಅತ್ಯಾಚಾರವೆಸಗಿ, ಅದರ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಕಾಲೇಜು ವಿದ್ಯಾರ್ಥಿನಿವೋರ್ವಳು ಗಂಭೀರ ಆರೋಪ ಮಾಡಿದ್ದು, ಇದೀಗ ಸುಭಾಷನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ ಆರು ತಿಂಗಳ ಹಿಂದೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಯುವಕನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅಪಹರಣ ಮಾಡಿ, ಅತ್ಯಾಚಾರ ಮಾಡಿದ್ದಾಗಿ ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ. ಘಟನೆಯ ವಿಡಿಯೋ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು, ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಮೇಲಿಂದ ಮೇಲೆ ದುಷ್ಕೃತ್ಯವೆಸಗಿದ್ದಾಗಿ ಹೇಳಿದ್ದಾಳೆ. ಇದೀಗ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಸಹೋದರಿ ಜೊತೆ ಹೊರಗಡೆ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿ ತಮ್ಮ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕೂಡ ಕಸಿದುಕೊಂಡಿದ್ದಾನೆಂದು ಹೇಳಿದ್ದಾಳೆ. ಕಳೆದ ಒಂದು ವರ್ಷದಿಂದ ಯುವಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದು, ಕಾಲೇಜ್ಗೆ ಹೋದಾಗಲೆಲ್ಲಾ ಹಿಂಬಾಲಿಸಿ, ಚಿತ್ರಹಿಂಸೆ ನೀಡಿದ್ದಾರೆಂದು ತಿಳಿಸಿದ್ದಾಳೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಭವಾನಿಪುರ ಬೈ ಎಲೆಕ್ಷನ್: ಬಿಜೆಪಿಯ ಪ್ರಿಯಾಂಕಾ ಶ್ರೀಮಂತೆ, ಸಿಎಂ ಮಮತಾ ಬಡ ಅಭ್ಯರ್ಥಿ!
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಸ್ಪಿ ಆಶಿಶ್ ಪ್ರತಾಪ್ ಸಿಂಗ್, ಕಿರುಕುಳ ನೀಡುತ್ತಿರುವ ಹಾಗೂ ಅತ್ಯಾಚಾರವೆಸಗಿರುವ ಕುರಿತು ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದಿದ್ದಾರೆ.