ಮುಂಬೈ (ಮಹಾರಾಷ್ಟ್ರ): ಎನ್‌ಸಿಪಿ ನಾಯಕ ಅಜಿತ್ ಪವಾರ್ ರಾಜ್ಯ ಸರ್ಕಾರವನ್ನು ಸೇರಿದ್ದರಿಂದ ಎರಡು ಎಂಜಿನ್ ಸರ್ಕಾರ ಈಗ ಟ್ರಿಪಲ್ ಇಂಜಿನ್ ಆಗಿ ಮಾರ್ಪಟ್ಟಿದೆ. ಈಗ ಈ ಸರ್ಕಾರ ಬುಲೆಟ್ ರೈಲಿನ ವೇಗದಲ್ಲಿ ಓಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ ನಂತರ ಸಿಎಂ ಏಕನಾಥ್ ಶಿಂಧೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಈಗ ಒಬ್ಬ ಮುಖ್ಯಮಂತ್ರಿ ಹಾಗೂ ಇಬ್ಬರು ಉಪಮುಖ್ಯಮಂತ್ರಿಗಳಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಈಗ ಟ್ರಿಪಲ್ ಎಂಜಿನ್ ಆಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾನು ಅಜಿತ್ ಪವಾರ್ ಮತ್ತು ಅವರ ನಾಯಕರನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: Maharashtra politics: ಸರ್ಕಾರ ರಚಿಸಲು ಶಿವಸೇನೆ ಜೊತೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಬೇಡ: ಡಿಸಿಎಂ ಪವಾರ್ ಪ್ರಶ್ನೆ
ಮುಂದುವರೆದು, ಅಜಿತ್ ಪವಾರ್ ಅವರ ಅನುಭವವು ಮಹಾರಾಷ್ಟ್ರವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈಗ ಈ ಸರ್ಕಾರ ಬುಲೆಟ್ ರೈಲಿನ ವೇಗದಲ್ಲಿ ಓಡಲಿದೆ. ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ಕುರಿತು ಚರ್ಚಿಸಲು ಸಾಕಷ್ಟು ಸಮಯವಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವು ಒಟ್ಟಾಗಿದ್ದೇವೆ. ಅವರು (ವಿಪಕ್ಷಗಳು) ಲೋಕಸಭೆ ಚುನಾವಣೆಯಲ್ಲಿ ನಾಲ್ಕೈದು ಸ್ಥಾನಗಳನ್ನು ಪಡೆದಿದ್ದಾರೆ. ಈ ಬಾರಿ ಅವರಿಗೆ ಆ ಸಂಖ್ಯೆ ಸ್ಥಾನಗಳನ್ನೂ ಪಡೆಯಲು ಸಾಧ್ಯವಾಗಲ್ಲ. ಪಕ್ಷಗಳು ನಾಯಕರನ್ನು ನಿರ್ಲಕ್ಷಿಸಿದಾಗ ಹೀಗಾಗುತ್ತದೆ ಎಂದು ಸಿಎಂ ಶಿಂಧೆ ಹೇಳಿದರು.
ಸಚಿವ, ಶಿವಸೇನೆ ನಾಯಕ ದೀಪಕ್ ಕೇಸರ್ಕರ್ ಪ್ರತಿಕ್ರಿಯಿಸಿ, ಅಜಿತ್ ಪವಾರ್ ಉತ್ತಮ ಆಡಳಿತಗಾರ. ಅವರು ನಮ್ಮೊಂದಿಗೆ ಬರಬೇಕೆಂದು ನಾನು ಹೇಳಿದ್ದೆ. ಅವರು ಇಂದು ಬಂದಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತಷ್ಟು ಉತ್ತಮ ಕೆಲಸ ಮಾಡುತ್ತದೆ ಎಂದು ಹೇಳಿದರು. ಮತ್ತೊಬ್ಬ ಸಚಿವ ಉದಯ್ ಸಾಮಂತ್ ಮಾತನಾಡಿ, ಅಜಿತ್ ಪವಾರ್ ನಮ್ಮ ಮೈತ್ರಿಗೆ ಬೆಂಬಲ ನೀಡಿ ನಮ್ಮೊಂದಿಗೆ ಬಂದಿದ್ದಾರೆ. ಈಗ ನಮ್ಮ ಬಲ 170ರಿಂದ 210 ಕ್ಕೆ ಏರಿದೆ. ಎನ್‌ಸಿಪಿ 40 ಶಾಸಕರು ನಮ್ಮೊಂದಿಗೆ ಬರುತ್ತಿದ್ದಾರೆ ಎಂದು ಹೇಳಿದರು.
ಕೆಲವೇ ದಿನದಲ್ಲಿ ಮತ್ತೊಬ್ಬ ಸಿಎಂ - ರಾವತ್ ಭವಿಷ್ಯ: ಮತ್ತೊಂದೆಡೆ, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಸಂಸದ ಸಂಜಯ್ ರಾವತ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಮಹಾರಾಷ್ಟ್ರಕ್ಕೆ ಮತ್ತೊಬ್ಬ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಇದು ಸಂಭವಿಸುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ಏಕನಾಥ್ ಶಿಂಧೆ ಮತ್ತು ಅವರೊಂದಿಗೆ ಹೋಗಿದ್ದ 16 ಶಾಸಕರನ್ನು ಅನರ್ಹಗೊಳಿಸಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರಕ್ಕೆ ಮತ್ತೊಬ್ಬ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಹೇಳಿದರು.
ನಾನು ಸಾಮ್ನಾ ಮೂಲಕ ಹೇಳಿದ್ದು ನಿಜವಾಗಿದೆ. ಮಹಾರಾಷ್ಟ್ರಕ್ಕೆ ಹೊಸ ಸಿಎಂ ಸಿಗುತ್ತದೆ ಎಂಬುದು ನನ್ನ ಭವಿಷ್ಯ ಅಥವಾ ಅಭಿಪ್ರಾಯವಲ್ಲ. ಆದರೆ ಇದು ನನ್ನ ದೃಢವಾದ ಅಭಿಪ್ರಾಯ. ಅಲ್ಲದೇ, ರಾಜಕೀಯದಲ್ಲಿ ಸಂಭವಿಸಬೇಕಾದ ಸಂಗತಿಗಳು ಸಂಭವಿಸಿವೆ. ಅದನ್ನು ನಾನು ಭೂಕಂಪ ಎಂದು ಪರಿಗಣಿಸುವುದಿಲ್ಲ. ಈ ಸರ್ಕಾರದ ಎಂಜಿನ್ ಸ್ಥಗಿತಗೊಳ್ಳುವ ಅಂಚಿನಲ್ಲಿದೆ ಎಂದು ಕುಟುಕಿದರು.
ಅಲ್ಲದೇ, ಈ ಬಗ್ಗೆ ಟ್ವೀಟ್ ಮಾಡಿರುವ ರಾವತ್, ನಾನು ಎನ್‌ಸಿಪಿ ನಾಯಕ ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ದೃಢವಾಗಿದ್ದಾರೆ. ಜನರ ಬೆಂಬಲ ನಮ್ಮ ಹಿಂದೆ ಇದೆ. ನಾವು ಉದ್ಧವ್ ಠಾಕ್ರೆ ಅವರೊಂದಿಗೆ ಹೊಸ ಆರಂಭ ಮಾಡಬಹುದು ಎಂದು ಹೇಳಿದ್ದಾರೆ. ಕೆಲವರು ಮಹಾರಾಷ್ಟ್ರದ ರಾಜಕೀಯವನ್ನು ಸಂಪೂರ್ಣವಾಗಿ ಹಾಳುಮಾಡಲು ನಿರ್ಧರಿಸಿದ್ದಾರೆಂದು ತೋರುತ್ತದೆ. ಅವರು ಆಯ್ಕೆ ಮಾಡಿದ ಹಾದಿಯಲ್ಲಿ ಮುಂದುವರಿಯಲಿ ಎಂದು ಬಿಜೆಪಿ, ಅಜಿತ್ ಪವಾರ್, ಏಕನಾಥ್ ಶಿಂಧೆ ವಿರುದ್ಧ ಟೀಕಿಸಿದ್ದಾರೆ.
ಇದನ್ನೂ ಓದಿ: Maharashtra politics: ಇಂದಿನ ಬೆಳವಣಿಗೆ ಶ್ರೇಯಸ್ಸು ಪ್ರಧಾನಿ ಮೋದಿಗೆ ನೀಡುತ್ತೇನೆ.. ಅವರಿಗೆ ನಾನು ಕೃತಜ್ಞ ಎಂದ ಶರದ್ ಪವಾರ್