ನವದೆಹಲಿ: ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡಲು ನಿರಾಕರಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸಲ್ಲಿಸಿದ ಅರ್ಜಿ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಹಿಂದೆ ಸರಿದಿದ್ದಾರೆ.
ಮಾಜಿ ಸಿಎಂ ಬಿಎಸ್ವೈ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಲಲಿತ್ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರನ್ನೊಳಗೊಂಡ ಪೀಠದ ಮುಂದೆ ಬಂದಿತ್ತು. ಈ ವೇಳೆ, ಸಿಜೆಐ ಯು ಯು ಲಲಿತ್ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ ಸಿಜೆಐ, ನಾನು ಈ ಅರ್ಜಿಯ ವಿಚಾರಣೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ನಾನು ಸದಸ್ಯನಲ್ಲದ ಪೀಠದ ಮುಂದೆ ಅದನ್ನು ಪಟ್ಟಿ ಮಾಡಿ. ನನಗೆ ಸ್ವಲ್ಪ ಕಷ್ಟವಿದೆ, ನಾನು ಈ ವಿಷಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಇತರರು ಆರೋಪಿಯಾಗಿರುವ ಬೆಂಗಳೂರಿನ ಆರ್‌ಟಿ ನಗರದ ಮಾಟದಹಳ್ಳಿ ಬಡಾವಣೆಯ ಗಂಗೇನಹಳ್ಳಿಯ 1.11 ಎಕರೆ ಜಮೀನು ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಾಮಾಜಿಕ ಕಾರ್ಯಕರ್ತ ಜಯಕುಮಾರ ಹಿರೇಮಠ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು 05.05.2015 ರಂದು ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 13(1)(c), 13(1) (d) r/w 13(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
1988 ರ ಕಾನೂನಿನ ಅನ್ವಯ ಸೆಕ್ಷನ್ 409, 413, 420, 120(b) r/w 34 IPC ಮತ್ತು ಕರ್ನಾಟಕ ಲ್ಯಾಂಡ್ (ವರ್ಗಾವಣೆ ಮೇಲಿನ ನಿರ್ಬಂಧ) ಕಾಯಿದೆ, 1991 ರ ವಿಭಾಗಗಳು 3 ಮತ್ತು 4 ರ ಅನ್ವಯ ಪ್ರಕರಣ ದಾಖಲಾಗಿತ್ತು.
ಡಿಸೆಂಬರ್ 23, 2020 ರಂದು ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಮತ್ತೊಂದು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಲು ನಿರಾಕರಿಸಿತ್ತು. ಆಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಜಮೀನುಗಳನ್ನು ಡಿ-ನೋಟಿಫೈ ಮಾಡಿ ಉದ್ಯಮಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಫೆಬ್ರವರಿ 2006 ಮತ್ತು ಅಕ್ಟೋಬರ್ 2007 ರ ನಡುವೆ ಬಿಎಸ್ವೈ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.
ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಮತ್ತೊಂದು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ ತೀರ್ಪು ಪ್ರಶ್ನಿಸಿ ಬಿಎಸ್ವೈ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದನ್ನು ಓದಿ:ಲಂಚ ಪ್ರಕರಣ: ಬಿಎಸ್ವೈ ಸಲ್ಲಿಸಿದ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್