ಚೆನ್ನೈ (ತಮಿಳುನಾಡು): ನಡು ರಸ್ತೆಯಲ್ಲೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳ್ಚೆಲ್ವನ್ ಅಲಿಯಾಸ್ ಶರವಣನ್ ಎಂದು ಗುರುತಿಸಲಾಗಿದೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿರುವ ಆರೋಪಿ ಶರವಣನ್, ಕೆಲ ದಿನಗಳ ಹಿಂದೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ತನ್ನ ಬೈಕ್ನಲ್ಲಿ ಹಿಂಬಾಲಿಸಿದ್ದ. ಅಲ್ಲದೇ, ಬೈಕ್ನಿಂದ ಡಿಕ್ಕಿ ಹೊಡೆದು, ನಂತರ ಅನುಚಿತವಾಗಿ ವರ್ತಿಸಿದ್ದ. ಜೊತೆಗೆ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಓಡಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕುರಿತು ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿಯ ಕರಾಳ ಮುಖ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗುರುವಾರ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಕೃತ್ಯದ ಎಸಗಿದ ದಿನ ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ಗೊತ್ತಾಗಿದೆ. ಈ ಹಿಂದೆ ಕೂಡ ಇಂತಹ ಕೃತ್ಯದಲ್ಲಿ ಈತ ಭಾಗಿಯಾಗಿದ್ದನಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆಸ್ತಿ ವಿವಾದ: ಸ್ವಂತ ಅಣ್ಣನನ್ನೇ ಕೊಂದ ತಮ್ಮಂದಿರು, ವಿಡಿಯೋ ವೈರಲ್