ಮುಂಬೈ: 'ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ' ಪುಸ್ತಕದ ಲೇಖಕರಿಂದ ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರಿನ ಮೇರೆಗೆ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ.
ಖಾರ್ ಪೊಲೀಸ್ ಠಾಣೆಯಲ್ಲಿ ಕಂಗನಾ, ಕಮಲ್ ಕುಮಾರ್ ಜೈನ್, ರಂಗೋಲಿ ಚಂದೇಲ್ ಮತ್ತು ಅಕ್ಷತ್ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ' ಪುಸ್ತಕದ ಲೇಖಕ ಆಶಿಶ್ ಕೌಲ್, ಕಂಗನಾ ರಣಾವತ್ ವಿರುದ್ಧ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ದೂರಿನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿರುವುದಾಗಿ ಆರೋಪಿಸಿದ್ದಾರೆ. ಹಿಂದಿಯಲ್ಲಿ ಈ ಪುಸ್ತಕದ ಅನುವಾದಿತ ಆವೃತ್ತಿಯು 'ದಿಡ್ಡಾ ಕಾಶ್ಮೀರದ ವಾರಿಯರ್ ಕ್ವೀನ್' ಹೆಸರಿನಲ್ಲಿ ಬಂದಿದೆ ಎಂದು ಆರೋಪಿಸಿದ್ದಾರೆ.
ಕಾಶ್ಮೀರದ ರಾಣಿ ಮತ್ತು ಲೋಹರ್ (ಪೂಂಚ್) ನ ರಾಣಿ ದಿಡ್ಡಾ ಅವರ ಕಥೆಯ ಹಕ್ಕುಸ್ವಾಮ್ಯವನ್ನು ನಕಲಿ ಮಾಡಿದ್ದಾರೆ. ಪ್ರಸಿದ್ಧ ನಟಿ ನನ್ನ ಪುಸ್ತಕದ ಕಥೆಯ ಮೇಲೆ ತಮ್ಮ ಅಧಿಕಾರವನ್ನು ಪ್ರತಿಪಾದಿಸಿರುವುದು ಕಲ್ಪನೆಗೆ ಮೀರಿದೆ ಎಂದು ಲೇಖಕರು ಹೇಳಿದ್ದಾರೆ.
ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 405 (ನಂಬಿಕೆ ಉಲ್ಲಂಘನೆ), 415 (ಖೋಟಾ), 120 ಬಿ (ಪಿತೂರಿ) ಮತ್ತು ಹಕ್ಕುಸ್ವಾಮ್ಯ ಕಾನೂನು ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ರಣಾವತ್ ಈಗಾಗಲೇ ಮುಂಬೈಯಲ್ಲಿ ಹಲವಾರು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.