ನವದೆಹಲಿ: ಕರ್ನಾಟಕದ ಮೂರನೇ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇಎಂಸಿ)ಅನ್ನು ಧಾರವಾಡ ಜಿಲ್ಲೆಯಲ್ಲಿ ಸ್ಥಾಪಿಸಲು ಕೇಂದ್ರವು ಅನುಮತಿ ಕೊಟ್ಟಿದೆ. ಇದರಿಂದ 1,500 ಕೋಟಿ ಹೂಡಿಕೆ ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಆ್ಯಪಲ್ ಮೊಬೈಲ್ ಮಾರಾಟ ಸಂಸ್ಥೆ ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್‌ನಂತಹ ಎಲೆಕ್ಟ್ರಾನಿಕ್ಸ್ ತಯಾರಿಕಾ ಮೇಜರ್‌ಗಳನ್ನು ಹೊಂದಿರುವ ಕರ್ನಾಟಕದಲ್ಲಿ ಎಲ್ಲ ಮೂರು ಇಎಂಸಿಗಳಲ್ಲಿನ ಸಂಯೋಜಿತ ಹೂಡಿಕೆ ಗುರಿಯನ್ನು 20,910 ಕೋಟಿ ರೂ.ಗಳವರೆಗೆ ಯೋಜಿಸಲಾಗಿದೆ. ಈಗಿನ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇಎಂಸಿ) ಯೋಜನೆಯು 224.5 ಎಕರೆ ಪ್ರದೇಶದಲ್ಲಿ 179 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದರಲ್ಲಿ 89 ಕೋಟಿ ರೂ.ಗೂ ಹೆಚ್ಚು ಕೇಂದ್ರದ ಹಣಕಾಸು ನೆರವು ಇರಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಇಂದು ಹುಬ್ಬಳ್ಳಿ - ಧಾರವಾಡದಲ್ಲಿ ಹೊಸ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಕೂಡ ಅನುಮೋದನೆಗೊಂಡಿದೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಈ ಇಎಂಸಿಯು ಕೋಟೂರ ಮತ್ತು ಬೇಲೂರ ಎಂಬ ಎರಡು ಗ್ರಾಮಗಳಲ್ಲಿ ಕ್ರಮವಾಗಿ 88.48 ಮತ್ತು 136.02 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಹೊಸ ಗ್ರೀನ್‌ಫೀಲ್ಡ್ ಇಎಂಸಿಯು ಮುಂದಿನ ದಿನಗಳಲ್ಲಿ1,500 ಕೋಟಿಗೂ ಹೆಚ್ಚು ಹೂಡಿಕೆ ಮತ್ತು 18,000ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಯಾಗುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಈಗಾಗಲೇ 9 ಕಂಪನಿಗಳು ಮತ್ತು ಸ್ಟಾರ್ಟ್ ಅಪ್‌ಗಳು 2,500 ಜನರಿಗೆ ಉದ್ಯೋಗಾವಕಾಶದೊಂದಿಗೆ 340 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದೆ. ಈ ಹಿಂದೆ ಇಎಂಸಿ1.0 ಯೋಜನೆಯಡಿ ಉದ್ಯಮದ ವಿವಿಧ ಪರೀಕ್ಷಾ ಅವಶ್ಯಕತೆಗಳನ್ನು ಪೂರೈಸಲು ಮೈಸೂರಿನಲ್ಲಿ ಸುಧಾರಿತ ಪರೀಕ್ಷಾ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್ಸಿ)ಕ್ಕೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೊಬೈಲ್ ಗೇಮ್ ಸ್ಟೋರ್ ಅಭಿವೃದ್ಧಿಪಡಿಸಿ ಆ್ಯಪಲ್, ಗೂಗಲ್ ವಿರುದ್ಧ ಮೈಕ್ರೋಸಾಫ್ಟ್ ಸ್ಪರ್ಧೆ