ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)ಯ 10ನೇ ತರಗತಿ ಟರ್ಮ್-2 ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇಷ್ಟರಲ್ಲೇ ತಮ್ಮ ರೋಲ್ ನಂಬರ್ ಉಪಯೋಗಿಸಿ ರಿಸಲ್ಟ್ ಚೆಕ್ ಮಾಡಿ, ಡೌನ್ಲೋಡ್ ಕೂಡ ಮಾಡಬಹುದು.
ಜುಲೈ 15ರೊಳಗೆ ಹತ್ತನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸುವುದಾಗಿ ಸಿಬಿಎಸ್‌ಇ ಈ ಮುನ್ನವೇ ಹೇಳಿದೆ. ಅದರಂತೆ 10ನೇ ತರಗತಿ ಫಲಿತಾಂಶಗಳು ಇಂದು ಪ್ರಕಟವಾಗಲಿವೆ. ಇನ್ನು 12ನೇ ತರಗತಿ ಫಲಿತಾಂಶ ಪ್ರಕಟಣೆಯ ನಿಖರ ದಿನಾಂಕವನ್ನು ಸಿಬಿಎಸ್‌ಇ ತಿಳಿಸಿಲ್ಲ.
ಸಿಬಿಎಸ್‌ಇ ತನ್ನ ಅಧಿಕೃತ ವೆಬ್ಸೈಟ್ cbse.gov.in ಮತ್ತು cbresults.nic.in ಗಳಲ್ಲಿ ರಿಸಲ್ಟ್ ಘೋಷಣೆ ಮಾಡಲಿದೆ. results.gov.in ನಲ್ಲಿಯೂ ಫಲಿತಾಂಶ ಲಭ್ಯವಾಗಲಿದೆ.
ಈ ವರ್ಷ 35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ಮತ್ತು 12ನೇ ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. 10 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 21 ಲಕ್ಷಕ್ಕೂ ಹೆಚ್ಚು. ಈಗ ಇವರೆಲ್ಲರೂ ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ.