ಪಾಟ್ನಾ( ಬಿಹಾರ): ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ನಾಯಕರ ಮನೆ ಸೇರಿದಂತೆ ಬಿಹಾರದ ಹಲವೆಡೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್‌ಜೆಡಿ ಎಂಎಲ್‌ಸಿ ಸುನೀಲ್ ಕುಮಾರ್ ಸಿಂಗ್ ಮತ್ತು ರಾಜ್ಯಸಭಾ ಸಂಸದ ಅಶ್ಫಾಕ್ ಕರೀಂ, ಆರ್‌ಜೆಡಿ ಸಂಸದ ಫಯದ್ ಅಹ್ಮದ್, ಮಾಜಿ ಎಂಎಲ್‌ಸಿ ಸುಬೋಧ್ ರಾಯ್ ಮತ್ತು ಮಾಜಿ ಶಾಸಕ ಅಬು ದುಜಾನಾ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮೂಲಗಳಿಂದ ಬಂದಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ರೈಲ್ವೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 'ಉದ್ಯೋಗಕ್ಕೆ ಬದಲಾಗಿ ತಮ್ಮ ಸದಸ್ಯರ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡಿದ್ದಾರೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಚಿವ ಸಿಸೋಡಿಯಾ ಸೇರಿ 13 ಮಂದಿಗೆ ಸಿಬಿಐ ಲುಕ್ ಔಟ್ ನೋಟಿಸ್
ರೈಲ್ವೆ ನೇಮಕಾತಿ ಹಗರಣ ಎಂದರೇನು?: ಲಾಲು ಪ್ರಸಾದ್ ಯಾದವ್ 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ‘ಡಿ’ ದರ್ಜೆಯ ನೇಮಕಾತಿಗೆ ಪ್ರತಿಯಾಗಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಭೂಮಿ, ನಿವೇಶನಗಳನ್ನು ವರ್ಗಾಯಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ಕುರಿತು ಮೇ 18 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಮಿಸಾ ಭಾರತಿ ಮತ್ತು ಹೇಮಾ ಯಾದವ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಜೊತೆಗೆ ಮೇ 2022 ರಲ್ಲಿ ಲಾಲು ಪ್ರಸಾದ್ ಯಾದವ್ಗೆ ಸಂಬಂಧಿಸಿದ 17 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ಗೆ ಸಂಬಂಧಿಸಿದ 15 ಸ್ಥಳಗಳ ಮೇಲೆ ಸಿಬಿಐ ದಾಳಿ