ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ಮಲಗಿದ್ದ ಮೂರು ವರ್ಷದ ಪುಟ್ಟ ಬಾಲಕಿಯ ಮೇಲೆ ಕಾರು ಹರಿದಿದ್ದು, ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ದಾರುಣ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಯತ್‌ನಗರದ ಟೀಚರ್ಸ್ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಬುಧವಾರ ಘಟನೆ ನಡೆದಿದೆ. ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಹರಿರಾಮ ಕೃಷ್ಣ ಎಂದು ಗುರುತಿಸಲಾಗಿದೆ. ಪಾರ್ಕಿಂಗ್ ಮಾಡುವಾಗ ನೆಲದ ಮೇಲೆ ಮಲಗಿದ್ದ ಮಗುವನ್ನು ಗಮನಿಸದೇ ಚಾಲನೆ ಮಾಡಿದ್ದಾರೆ. ಇದರ ಪರಿಣಾಮ ಮಲಗಿದ್ದಲ್ಲೇ ಮಗು ಅಸುನೀಗಿದೆ.
ಕರ್ನಾಟಕದಿಂದ ವಲಸೆ ಬಂದಿದ್ದ ಕುಟುಂಬ: ರಾಜು ಮತ್ತು ಕವಿತಾ ಎಂಬ ದಂಪತಿಯ ಮಗು ಅಸುನೀಗಿದೆ. ಕರ್ನಾಟಕದ ಕಲಬುರಗಿ ಜಿಲ್ಲೆಯವರಾದ ಇವರು ತಮ್ಮ ಏಳು ವರ್ಷದ ಮಗ ಮತ್ತು ಪುಟ್ಟ ಮಗಳೊಂದಿಗೆ ಜೀವನೋಪಾಯಕ್ಕಾಗಿ ಹೈದರಾಬಾದ್‌ಗೆ ವಲಸೆ ಬಂದಿದ್ದರು. ರಾಜು- ಕವಿತಾ ಇಬ್ಬರೂ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬುಧವಾರ ಸಹ ಅಪಾರ್ಟ್‌ಮೆಂಟ್ ಕಟ್ಟಡದ ಸಮೀಪದಲ್ಲಿಯೇ ದಂಪತಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ಹೊತ್ತು ಮಗುವನ್ನು ಬಿಸಿಲಿನ ತಾಪದಿಂದ ರಕ್ಷಿಸಲು ಕವಿತಾ ಪಾರ್ಕಿಂಗ್ ಪ್ರದೇಶಕ್ಕೆ ಕರೆತಂದು ಬಿಟ್ಟು ನೆಲದ ಮೇಲೆ ಮಲಗಿಸಿದ್ದರು. ಆದರೆ, ಮನೆಗೆ ಮರಳಿದ ರಾಮಕೃಷ್ಣ ತಮ್ಮ ಕಾರು ಪಾರ್ಕಿಂಗ್ ಮಾಡುವಾಗ ಮಗುವನ್ನು ಗಮನಿಸಲು ವಿಫಲರಾಗಿದ್ದಾರೆ. ಇದರಿಂದ ಕಾರಿನ ಮುಂಭಾಗದ ಚಕ್ರ ಮಗುವಿನ ತಲೆ ಹರಿದು ನಜ್ಜುಗುಜ್ಜಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರು ಚಾಲಕ ರಾಮಕೃಷ್ಣ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಇವರ ಪತ್ನಿ ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಹಯತ್‌ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಾರಿನಡಿ ಬಿದ್ದರೂ ಗಮನಿಸದ ಚಾಲಕ: ಪುಟ್ಟ ಬಾಲಕಿ ದುರ್ಮರಣ
ಗುಜರಾತ್ ಘಟನೆಯ ನೆನಪು: ಈ ಹಿಂದೆ ಗುಜರಾತ್ನ ಸೂರತ್ನಲ್ಲೂ ಇಂತಹದ್ದೆ ಘಟನೆ ನಡೆದಿತ್ತು. ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಳು. ವಶ್ರಂಭಾಯಿ ಎಂಬುವರ ಮೂರು ವರ್ಷದ ಮಗಳು ಇತರ ಮೂರ್ನಾಲ್ಕು ಮಕ್ಕಳೊಂದಿಗೆ ಮನೆಯ ಆವರಣದಲ್ಲಿ ಆಟವಾಗುತ್ತಿದ್ದಳು. ಮೂವರು ಬಾಲಕರು ಎರಡು ಸೈಕಲ್ಗಳನ್ನು ಹಿಡಿದು ಆಟವಾಡುತ್ತಿದ್ದರು. ಮತ್ತೊಂದೆಡೆ, ಕೈಯಲ್ಲಿ ಗುಲಾಬಿ ಬಣ್ಣದ ಚೆಂಡು ಹಿಡಿದುಕೊಂಡು ಬಾಲಕಿ ಇದ್ದಕ್ಕಿದ್ದಂತೆ ಗೇಟ್ನ ಬಳಿಗೆ ಹೋಗಿದ್ದಳು. ಕಾರೊಂದು ಬಂದು ಬಾಲಕಿಗೆ ಗುದ್ದಿ ಮೇಲೆ ಹರಿತ್ತು.
ಆಗ ಬಾಲಕಿ ಮೇಲೆ ಕಾರು ಹರಿದ ದೃಶ್ಯವನ್ನು ಗಮನಿಸಿದ ಮಹಿಳೆಯೊಬ್ಬರು ತಕ್ಷಣವೇ ಕೂಗುತ್ತಾ ಓಡಿ ಬಂದಿದ್ದರು. ಬಾಲಕಿಯನ್ನು ಮಹಿಳೆ ಎತ್ತಿಕೊಂಡಿದ್ದರು. ನಂತರ ಸ್ಕೂಟರ್ನಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿತ್ತು. ಮನೆಯ ಆವರಣದಲ್ಲಿ ಅವಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಇದರ ದೃಶ್ಯಗಳು ಸೆರೆಯಾಗಿದ್ದವು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ