ನವದೆಹಲಿ: ಮಹಿಳೆಯರ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಕೇಂದ್ರ ಸಂಪುಟವು ನಿರ್ಣಯವನ್ನು ಅಂಗೀಕರಿಸಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. 2020ರ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಮಹಿಳೆಯರ ಕಾನೂನುಬದ್ಧ ವಿವಾಹದ ವಯಸ್ಸನ್ನು ಹೆಚ್ಚಿಸುವುದಾಗಿ ಹೇಳಿದ್ದರು ಎಂಬುದು ಇಲ್ಲಿ ಗಮನಾರ್ಹ..
ಮೂಲಗಳ ಪ್ರಕಾರ, 18ರಿಂದ 21 ವರ್ಷಕ್ಕೆ ಮಹಿಳೆಯರ ವಿವಾಹದ ವಯಸ್ಸು ಹೆಚ್ಚಿಸಲು ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲೇ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ತಿದ್ದುಪಡಿಗಾಗಿ ಸದನದಲ್ಲಿ ಮಂಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಕಾಯ್ದೆಯ ಜೊತೆಗೆ ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ-1995ರಲ್ಲಿಯೂ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತದೆ ಎನ್ನಲಾಗ್ತಿದೆ.
ರಾಜಕಾರಣಿ ಮತ್ತು ಹೋರಾಟಗಾರ್ತಿ ಜಯಾ ಜೇಟ್ಲಿ ನೇತೃತ್ವದ ಕೇಂದ್ರದ ಕಾರ್ಯಪಡೆಯು ಡಿಸೆಂಬರ್ 2020ರಲ್ಲಿ ನೀತಿ ಆಯೋಗಕ್ಕೆ ಸಲ್ಲಿಸಿದ ಶಿಫಾರಸುಗಳ ಆಧಾರದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತಾಯ್ತನಕ್ಕೆ ಸಂಬಂಧಿಸಿದ ವಿಷಯಗಳು, ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವ ಅಗತ್ಯತೆ, ಪೌಷ್ಟಿಕಾಂಶದ ಮಟ್ಟ ಮುಂತಾದ ವಿಚಾರಗಳ ಮೇಲೆ ಜಯಾ ಜೇಟ್ಲಿ ಅವರ ನೇತೃತ್ವದ ತಂಡ ಅಧ್ಯಯನ ನಡೆಸಿತ್ತು.
ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿರುವ ಜಯಾ ಜೇಟ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಈ ರೀತಿಯ ಶಿಫಾರಸನ್ನು ಮಾಡುವ ಉದ್ದೇಶವನ್ನು ಕೇಂದ್ರದ ಕಾರ್ಯಪಡೆ ಹೊಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ.. ಗೋವಾ ಸಚಿವ ಮಿಲಿಂದ್ ನಾಯ್ಕ್ ರಾಜೀನಾಮೆ