ಉತ್ತರಕಾಶಿ(ಉತ್ತರಾಖಂಡ): ಇಲ್ಲಿನ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 33 ಪ್ರಯಾಣಿಕರಿದ್ದ ಖಾಸಗಿ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು, ಸದ್ಯಕ್ಕೆ 7 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಮಾಹಿತಿಯ ಪ್ರಕಾರ, ಗುಜರಾತ್‌ನಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಗಂಗೋತ್ರಿ ಹೆದ್ದಾರಿಯ ಗಂಗ್ನಾನಿ ಎಂಬಲ್ಲಿ ಆಳವಾದ ಕಮರಿಗೆ ಬಿದ್ದಿದೆ. ಬಸ್ ಗಂಗೋತ್ರಿಧಾಮದಿಂದ ಉತ್ತರಕಾಶಿ ಕಡೆಗೆ ಹೋಗುತ್ತಿತ್ತು. ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ಖಚಿತಪಡಿಸಿದೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಭಾನುವಾರ ಸಂಜೆ 4:15 ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಪರಿಹಾರ ಕಾರ್ಯಕ್ಕೆ ಅಗತ್ಯವಿದ್ದಲ್ಲಿ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಆದೇಶ ಬಂದಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮೃತರ ಮತ್ತು ಗಾಯಾಳುಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ. ಅಪಘಾತಕ್ಕೀಡಾದ ಬಸ್‌ನಲ್ಲಿ ಇದ್ದ ಎಲ್ಲರೂ ಗುಜರಾತಿ ಯಾತ್ರಾರ್ಥಿಗಳು ಎಂದು ತಿಳಿದುಬಂದಿದೆ. ಅಪಘಾತಕ್ಕೆ ಕಾರಣ ಮತ್ತು ನಿಖರವಾದ ಸಮಯ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ: ಉತ್ತರಕಾಶಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. ಏಳು ಜನರ ಸಾವಿಗೆ ಕಾರಣವಾದ ಅಪಘಾತ ದುಃಖ ತರಿಸಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕೋರಿದ್ದಾರೆ.
"ದೇವರು ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಗಾಯಗೊಂಡವರೆಲ್ಲರೂ ಚೇತರಿಸಿಕೊಳ್ಳಲೆಂದು ನಾನು ಬಯಸುವುದಾಗಿ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.
ಹಿಮಾಚಲಪ್ರದೇಶದಲ್ಲಿ ಮಳೆ ದುರಂತ: ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿ ಆಗಸ್ಟ್ 14 ರಂದು ಸಂಭವಿಸಿದ ಭೂಕುಸಿತ ದುರಂತದಲ್ಲಿ ಇಂದು(ಭಾನುವಾರ) ಮತ್ತೊಂದು ಶವ ಹೊರತೆಗೆಯುವ ಮೂಲಕ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಅಲ್ಲದೇ, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಭದ್ರತಾ ಮತ್ತು ವಿಪತ್ತು ಪರಿಹಾರ ಪಡೆಗಳು ಸತತ ಏಳನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಇದನ್ನೂ ಓದಿ: DRDO Drone Crashes: ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ಮಾದರಿ ವಿಮಾನ 'ತಪಸ್' ಪತನ