ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ವಿಪಕ್ಷಗಳ I.N.D.I.A ಕೂಟ ಸೇರುವ ನಿರೀಕ್ಷೆ ಹುಸಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಕಣಕ್ಕಿಳಿಯಲಾಗುವುದು ಎಂದು ಅವರು ಸೋಮವಾರ ಘೋಷಿಸಿದರು.
ಮಾಯಾವತಿ ತಮ್ಮ ಜನ್ಮದಿನವಾದ ಇಂದು ಬಹುದೊಡ್ಡ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಈ ಹಿಂದೆಯೇ ಹೇಳಿದಂತೆ ಚುನಾವಣೆಯಲ್ಲಿ ಯಾವುದೇ ಮೈತ್ರಿಯ ಜೊತೆ ಸೇರದೇ, ಏಕಾಂಗಿಯಾಗಿ ಪಕ್ಷ ಲೋಕಸಭೆಯಲ್ಲಿ ಸೆಣಸಲಿದೆ ಎಂದು ಅವರು ಪುನರುಚ್ಚರಿಸಿದರು. ಇದರಿಂದ ವಿಪಕ್ಷಗಳ ಕೂಟಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ.
ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರ ಜೊತೆ ರಾಜಧಾನಿ ಲಖನೌನಲ್ಲಿ ಕೇಕ್ ಕತ್ತರಿಸಿದ ಬಳಿಕ ಮಾತನಾಡಿದ ಅವರು, "ನಾನು ರಾಜಕೀಯದಿಂದ ವಿರಮಿಸುವುದಿಲ್ಲ. ನಿವೃತ್ತಿಯಾಗುವ ಮಾತೇ ಇಲ್ಲ. ಚುನಾವಣೆಗಳಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನನ್ನ ಪಕ್ಷವನ್ನು ಏಕಾಂಗಿಯಾಗಿ ಕಣದಲ್ಲಿ ಇಳಿಸುವೆ" ಎಂದು ತಮ್ಮ ನಿರ್ಧಾರ ಪ್ರಕಟಿಸಿದರು.
ಇದನ್ನೂ ಓದಿ: ವಿಪಕ್ಷಗಳ I.N.D.I.A ಕೂಟಕ್ಕೆ ಬಿಎಸ್ಪಿ ಸೇರ್ಪಡೆ ಸಾಧ್ಯತೆ: 15 ರಂದು ಅಧಿಕೃತ ಘೋಷಣೆ?