ಶಿಲ್ಲಾಂಗ್: ಮೇಘಾಲಯದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 45,000 ಕೆ.ಜಿ ಒಣ ಬಟಾಣಿ ಸಾಗಿಸುತ್ತಿದ್ದ 58 ಬಾಂಗ್ಲಾದೇಶದ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಾಜು 68 ಲಕ್ಷ ರೂ.ಗಳ ಮೌಲ್ಯದ ಒಣ ಬಟಾಣಿಯನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ವೇಳೆ 30ನೇ ಬೆಟಾಲಿಯನ್‌ಗೆ ಸೇರಿದ ಬಿಎಸ್‌ಎಫ್ ಸೈನಿಕರು ಮೇಘಾಲಯದ ಪಶ್ಚಿಮ ಜಾಂಟಿಯಾ ಹಿಲ್ಸ್ ಜಿಲ್ಲೆಯ ಮುಕ್ತಾಪುರ ಗಡಿಯಲ್ಲಿ ಅಕ್ರಮ ಕೃತ್ಯಕ್ಕೆ ತಡೆಯೊಡ್ಡಿದ್ದಾರೆ.
ಮೇಘಾಲಯದುದ್ದಕ್ಕೂ ಇರುವ 443 ಕಿ.ಮೀ ಇಂಡೋ-ಬಾಂಗ್ಲಾ ಗಡಿಯು ನದಿ, ದಟ್ಟ ಕಾಡುಗಳು, ಗುಡ್ಡಗಾಡು ಪ್ರದೇಶಗಳು ಮತ್ತು ಭಾಗಶಃ ರಕ್ಷಣೆಯಿಲ್ಲದ ಗಡಿಗಳನ್ನು ಒಳಗೊಂಡಿದೆ. ಇದು ಎಲ್ಲಾ ರೀತಿಯ ಕಳ್ಳಸಾಗಣೆ ಮತ್ತು ಅಕ್ರಮ ವ್ಯಾಪಾರಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಇಂತಹ ಕಳ್ಳಸಾಗಣೆ ಯಾವುದೇ ರಾಷ್ಟ್ರದ ಆರ್ಥಿಕತೆಗೆ ಧಕ್ಕೆ ತರುತ್ತದೆ. ಇದು ಭಾರತೀಯ ಉತ್ಪಾದಕರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಬಿಎಸ್‌ಎಫ್ ವಕ್ತಾರ ಯು.ಕೆ.ನಾಯಲ್ ತಿಳಿಸಿದರು.