ಹೈದರಾಬಾದ್ (ತೆಲಂಗಾಣ) : ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಯಾರಿ ಜೋರಾಗಿದೆ. ಎಲೆಕ್ಷನ್ಗೂ ಮುನ್ನವೇ ಸಾರ್ವಜನಿಕರನ್ನು ತಮ್ಮತ್ತ ಸೆಳೆಯಲು ಎಲ್ಲಾ ಪಕ್ಷಗಳು ಯೋಜನೆ ರೂಪಿಸುತ್ತಿವೆ. ಈ ಬೆನ್ನಲ್ಲೇ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಖಂಡಿಸಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರು ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.
ಶನಿವಾರ ಸಿದ್ದಿಪೇಟೆ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವ ಟಿ. ಹರೀಶ್ ರಾವ್, "ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ ಬಿಆರ್‌ಎಸ್ ಶಾಸಕರು ಮತ್ತು ಕಾರ್ಯಕರ್ತರು ಸೇರಿರುವುದನ್ನು ನೋಡಿದರೆ ಆಡಳಿತ ಪಕ್ಷವು ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಿದೆ ಎನ್ನುವುದನ್ನು ಸೂಚಿಸುತ್ತದೆ. ಚಂದ್ರಬಾಬು ನಾಯ್ದು ಅವರ ಬಂಧನ ದುರದೃಷ್ಟಕರ ಮತ್ತು ಈ ವಯಸ್ಸಿನಲ್ಲಿ ಮಾಜಿ ಸಿಎಂ ಅವರನ್ನು ಬಂಧನ ಮಾಡುವುದು ಒಳ್ಳೆಯದಲ್ಲ. ಕೆಸಿಆರ್ 24 ಗಂಟೆ ವಿದ್ಯುತ್ ನೀಡುತ್ತಿಲ್ಲ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ನಾಚಿಕೆಗೇಡಿನ ಸಂಗತಿ. 60 ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್, ರೈತರ ಬಗ್ಗೆ ಯೋಚಿಸಲೇ ಇಲ್ಲ" ಎಂದು ಆರೋಪಿಸಿದರು.
ಇದನ್ನೂ ಓದಿ : ಪೋಸ್ಟ್ ಕಾರ್ಡ್‌ಗಳ ಮೂಲಕ ಚಂದ್ರಬಾಬು ನಾಯ್ಡುಗೆ ಭಾರಿ ಬೆಂಬಲ.. 7 ಲಕ್ಷ ಪತ್ರ ಬರೆದ ಅಭಿಮಾನಿಗಳು!
ಚಂದ್ರಬಾಬು ನಾಯ್ದು ಬಂಧನಕ್ಕೆ ಪುವ್ವಾಡ ಅಜಯ್ ಕುಮಾರ್ ಆಕ್ರೋಶ: ಇತ್ತೀಚೆಗೆ ಟಿಡಿಪಿ ನಾಯಕ ಪುವ್ವಾಡ ಅಜಯ್ ಕುಮಾರ್ ಅವರು ಸಹ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ. ನಾಯ್ಡು ಅವರ ಅಕ್ರಮ ಬಂಧನವನ್ನು ಖಂಡಿಸಲಾಗುವುದು, ರಾಜ್ಯಪಾಲರ ಅನುಮತಿಯಿಲ್ಲದೆ ಅವರನ್ನು ಬಂಧಿಸಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಆಡಳಿತದ ಸಂದರ್ಭದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಾರ್ವಜನಿಕ ಅಗತ್ಯಗಳಿಗಾಗಿ ಸಿಎಂ ಆದವರು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಐಟಿ ಉದ್ಯೋಗಿಗಳಿಂದ ಬೃಹತ್ ಕಾರು ರ್ಯಾಲಿ.. 9 ಮಂದಿ ಸೆರೆ
ಹರೀಶ್ ರಾವ್ ಸಿದ್ದಿಪೇಟೆ ಜಿಲ್ಲಾ ಪ್ರವಾಸ : ಇನ್ನು ನಿನ್ನೆ ನಂಗುನೂರು ಮಂಡಲದ ನರ್ಮೆಟ್ಟಕ್ಕೆ ಹರೀಶ್ ರಾವ್ ಭೇಟಿ ನೀಡಿ ತಾಳೆ ಎಣ್ಣೆ ಕೈಗಾರಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿ, ಈ ಭಾಗದ ರೈತರ ಆರ್ಥಿಕ ಬೆಳವಣಿಗೆಗೆ ಈ ಉದ್ಯಮ ಸಾಕಷ್ಟು ಕೊಡುಗೆ ನೀಡಲಿದೆ. ತಾಳೆ ಬೇಸಾಯದಲ್ಲಿ ಸೂಕ್ತ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಭಾರತ ಶೇ.60 ರಷ್ಟು ತಾಳೆ ಎಣ್ಣೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ರಾಜ್ಯದಲ್ಲಿ 20 ಲಕ್ಷ ಎಕರೆಯಲ್ಲಿ ತಾಳೆ ಗಿಡ ಬೆಳೆಯುವ ಗುರಿ ಹೊಂದಲಾಗಿದೆ. ಜೈ ಜವಾನ್ ಜೈ ಕಿಸಾನ್ ಘೋಷಣೆಯನ್ನು ಕೆಸಿಆರ್ ನಿಜವಾಗಿಸಿದ್ದಾರೆ ಎಂದರು.
ಇದನ್ನೂ ಓದಿ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಆಂಧ್ರಪ್ರದೇಶ ಬಂದ್; ಬಂಧಿಸಿದ್ದು ತಪ್ಪೆಂದ ಮಮತಾ ಬ್ಯಾನರ್ಜಿ