ಜೈಪುರ (ರಾಜಸ್ಥಾನ): ಮದುವೆ ಮಾಡಿಕೊಳ್ಳುವ ವೇಳೆ ವಧುವಿನ ಮನೆಯವರು ವರನಿಗೆ ಚಿನ್ನ, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನೀಡುವುದು ಸಾಮಾನ್ಯ. ವರದಕ್ಷಿಣೆ ನೀಡುವುದು ಕಾನೂನು ಪ್ರಕಾರ ಅಪರಾಧ ಎನ್ನುವುದು ತಿಳಿದಿದ್ದರೂ ವರದಕ್ಷಿಣೆ ನೀಡಲಿಲ್ಲ ಎಂದು ಅನೇಕ ಮದುವೆಗಳು ಮುರಿದು ಬಿದ್ದಿರುವ ನಿದರ್ಶನಗಳಿವೆ. ಆದರೆ, ರಾಜಸ್ಥಾನದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆಯಿತು.
ಜೈಪುರದ ಸಂಗನೇರ್ ಸದರ ಥಾಣೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಮಾಡಿಕೊಳ್ಳಲು ವಧು 2 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಮದುವೆ ರದ್ದು ಮಾಡಿಕೊಳ್ಳುವುದಾಗಿ ಬೆದರಿಕೆ ಸಹ ಹಾಕಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ವರನ ತಂದೆಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆದುಕೊಂಡು ಬಂದ ಬಳಿಕ ವಧುವಿನ ಕುಟುಂಬದ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಅಮೆರಿಕ ವಾಯುಪಡೆಯಲ್ಲಿ ಭಾರತೀಯ: ಸಮವಸ್ತ್ರದಲ್ಲಿದ್ದಾಗ ಹಣೆಗೆ 'ತಿಲಕ'ವಿಡಲು ಅನುಮತಿ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂಗನೇರ್ ನಿವಾಸಿ ಇಂದ್ರರಾಜ್ ಅವರ ಮಗನ ಮದುವೆ ಕಿರಣ್ ಎಂಬ ಹುಡುಗಿ ಜೊತೆ ನಿಶ್ಚಯವಾಗಿತ್ತು. ಮದುವೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಹುಡುಗಿಯ ತಂದೆ ಹಣಕಾಸಿನ ತೊಂದರೆ ಇದೆ ಎಂದು ವರನ ಕುಟುಂಬಸ್ಥರಿಂದ ಹಣ, ಬಟ್ಟೆ, ಒಡವೆ ತೆಗೆದುಕೊಂಡು ಹೋಗಿದ್ದರು. ಇದರ ಜೊತೆಗೆ ಬ್ಯಾಂಕ್ನಿಂದ ಸಾಲ ಪಡೆದುಕೊಳ್ಳಬೇಕಾಗಿದ್ದು, ನೀವೂ ಜಾಮೀನುದಾರರಾಗಿ ಎಂದು ಹೇಳಿ ಖಾಲಿ ಸ್ಟಾಂಪ್ ಮೇಲೆ ಹುಡುಗನ ತಂದೆಯ ಸಹಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಮದುವೆ ಆಗಬೇಕಾದರೆ ಎರಡು ಲಕ್ಷ ರೂ. ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಯುವಕನ ತಂದೆಗೆ ಹೃದಯಾಘಾತ: ಮದುವೆಗ ಮುಂಚಿತವಾಗಿ 2ರಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬಟ್ಟೆ ಮತ್ತಿತರ ವಸ್ತುಗಳನ್ನು ನೀಡಿದ ಬಳಿಕವೂ ಹುಡುಗಿ ಮದುವೆ ಮಾಡಿಕೊಳ್ಳಲು ಹಣ ಕೇಳಿರುವ ಸುದ್ದಿ ತಿಳಿಯುತ್ತಿದ್ದಂತೆ ಯುವಕನ ತಂದೆಗೆ ಹೃದಯಾಘಾತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.