ಕರೌಲಿ, ರಾಜಸ್ಥಾನ : ಕರೌಲಿಯಲ್ಲಿ ನಡೆದ ಹಿಂಸಾಚಾರದ ವಿರುದ್ಧ ಭಾರತೀಯ ಜನತಾ ಪಕ್ಷವು ಕರೌಲಿಯಲ್ಲಿ ನ್ಯಾಯ ಯಾತ್ರೆಯನ್ನು ನಡೆಸುತ್ತಿದೆ. ಈ ವೇಳೆ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಡಾ.ಸತೀಶ್ ಪೂನಿಯಾ ಅವರನ್ನು ಹಿಂದೌನ್ ರಸ್ತೆಯಲ್ಲಿ ಪೊಲೀಸರು ತಡೆದಿರುವ ಘಟನೆ ನಡೆದಿದೆ. ಕರೌಲಿ ಹಿಂಸಾಚಾರದ ಸಂತ್ರಸ್ತರ ಭೇಟಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸರು ತಡೆದಿದ್ದು, ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ಮುಖಂಡರು ಧರಣಿ ಕುಳಿತಿದ್ದಾರೆ.
ಬಿಜೆಪಿಯ ಯಾತ್ರೆಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕರೌಲಿ ಜಿಲ್ಲೆಯ ಬಹುತೇಕ ಗಡಿಗಳನ್ನು ಮುಚ್ಚಲಾಗಿದೆ. ಹಲವೆಡೆ ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ. ಹಿಂಸಾಚಾರದಲ್ಲಿ ಗಾಯಗೊಂಡ ಯುವಕರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ತೇಜಸ್ವಿ ಸೂರ್ಯ ಮಾತನಾಡಿಸಿ ಹೊರಬಂದು, ಸಿಎಂ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೆಹ್ಲೋಟ್ ಅವರ ಸರ್ಕಾರವನ್ನು ಜಂಗಲ್ ರಾಜ್ಗೆ ಹೋಲಿಸಿದ್ದಾರೆ.
ಅಷ್ಟೇ ಅಲ್ಲ, ರಾಜಸ್ಥಾನದ ಸರ್ವಾಧಿಕಾರಿ ಸರ್ಕಾರ ನಮ್ಮನ್ನೆಲ್ಲ ತಡೆದಿದೆ. ನಾವು ಈಗ ಇರುವ ಸ್ಥಳದಲ್ಲಿ ಸೆಕ್ಷನ್ 144 ಅನ್ವಯಿಸುವುದಿಲ್ಲ, ಪೊಲೀಸರು ನಮ್ಮನ್ನು ತಡೆದಿದ್ದಾರೆ. ಗೆಹ್ಲೋಟ್ ಸರ್ಕಾರ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ಪ್ರಕರಣ: ಜಡ್ಜ್ಗಳಿಗೆ ಬೆದರಿಕೆ ಹಾಕಿದ್ದ ಆರೋಪಿಗೆ ಸುಪ್ರೀಂಕೋರ್ಟ್ ನೋಟಿಸ್