ಕೋಲ್ಕತ್ತಾ: ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ಭರಿತ ಪೋಸ್ಟ್ ಹಾಕಿದ್ದ ರಾಜ್ಯ ಯುವ ವಿಭಾಗದ ಮುಖ್ಯಸ್ಥ ಸೌಮಿತ್ರಾ ಖಾನ್ ಕ್ಷಮೆಯಾಚಿಸಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ಆಡಳಿತಾರೂಢ ಟಿಎಂಸಿ ವಿರುದ್ಧ ತೀವ್ರವಾದ ಆಂದೋಲನ ಶುರು ಮಾಡುವುದಾಗಿ ಶಪಥ ಮಾಡಿದ್ದಾರೆ.
ಭಾನುವಾರ ನಡೆದ ಪಕ್ಷದ ಯುವ ವಿಭಾಗದ ಸಭೆಯಲ್ಲಿ ಖಾನ್ ಮಾತನಾಡಿ, ಫೇಸ್‌ಬುಕ್‌ನಲ್ಲಿ ನಮ್ಮ ಪಕ್ಷದ ನಾಯಕರ ವಿರುದ್ಧ ಪೋಸ್ಟ್ ಮಾಡಿರುವುದು ನನ್ನ ದೊಡ್ಡ ತಪ್ಪು. ಈ ಹಿನ್ನೆಲೆ ನಿಮ್ಮೆಲ್ಲರ ಸಮ್ಮುಖದಲ್ಲಿ ಅವರ ಕ್ಷಮೆ ಕೋರುತ್ತೇನೆ ಎಂದರು.
ಬಂಗಾಳದಲ್ಲಿ ನಡೆದ ಚುನಾವಣಾ ನಂತರದ ಹಿಂಸಾಚಾರದ ಬಗ್ಗೆ ಟಿಎಂಸಿ ದೂಷಿಸಿದ ಅವರು, ಮನೀಶ್ ಶುಕ್ಲಾ ಅವರಂತಹ ನಾಯಕರ ಸಾವು ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದರು. ಉತ್ತರ 24 ಪರಗಣ ಜಿಲ್ಲೆಯ ಸ್ಥಳೀಯ ಮುಖಂಡ ಶುಕ್ಲಾ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಟಿಎಂಸಿಗೆ 211 ವಿಧಾನಸಭಾ ಕ್ಷೇತ್ರಗಳನ್ನು ಪಡೆಯಲು ಸಾಧ್ಯವಾದರೆ, ಭವಿಷ್ಯದಲ್ಲಿ ನಾವು 250 ಸ್ಥಾನಗಳನ್ನು ಪಡೆಯಲು ಏಕೆ ಸಾಧ್ಯವಿಲ್ಲ? ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತೇವೆ ಎಂದರು.
ಜುಲೈ 2021ರ ಆರಂಭದಲ್ಲಿ ಖಾನ್, ಅಧಿಕಾರಿ ಹಾಗೂ ದಿಲೀಪ್ ಘೋಷ್ ವಿರುದ್ಧ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಕ್ಷಮೆಯಾಚಿಸಿದ್ದಾರೆ.