ನವದೆಹಲಿ: ಛತ್ ಪೂಜೆ ವೇಳೆ ಆಯೋಜಿಸುವ ಸಾರ್ವಜನಿಕ ಕೂಟಗಳ ಮೇಲೆ ನಿಷೇಧ ಹೇರಿದ ದೆಹಲಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ಮನೋಜ್ ತಿವಾರಿ ಗಾಯಗೊಂಡಿದ್ದಾರೆ.
ಕಳೆದ ವಾರ ನಡೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ, ಕೋವಿಡ್ ಸಾಂಕ್ರಾಮಿಕ ಗಮನದಲ್ಲಿಟ್ಟುಕೊಂಡು ಛತ್ ಪೂಜೆಯ ಸಮಯದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಸೇರುವ ಸಾರ್ವಜನಿಕ ಕೂಟ ನಿಷೇಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಇದನ್ನು ಖಂಡಿಸಿದ ವಿವಿಧ ಛತ್ ಪೂಜಾ ಸಮಿತಿಗಳ ಮುಖ್ಯಸ್ಥರು ಮನೋಜ್ ತಿವಾರಿ ಬಳಿ ಹೋಗಿ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ರಥಯಾತ್ರೆ ಮೂಲಕ ಪ್ರತಿಭಟನೆ ನಡೆಸಲು ತಿವಾರಿ ಮುಂದಾಗಿದ್ದು, ಕಳೆದ ಮೂರು ದಿನಗಳಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕಾನ್ಪುರದಲ್ಲಿ ಅಖಿಲೇಶ್ ಯಾದವ್ 'ರಥಯಾತ್ರೆ'.. ಗಂಗೆ, ರೈತರ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಿಡಿ..
ಇಂದು ರಥಯಾತ್ರೆಯು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ತಲುಪಿದ್ದು, ಈ ವೇಳೆ ಪಕ್ಷದ ಕಾರ್ಯಕರ್ತರು, ಮನೋಜ್ ತಿವಾರಿ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಎಲ್ಲರೂ ಜೊತೆಗೂಡಿ ಘೋಷಣೆ ಕೂಗಿದರು. ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಈ ವೇಳೆ ತಿವಾರಿ ಬ್ಯಾರಿಕೇಡ್ ಮೇಲೆ ಬಿದ್ದು ಗಾಯಗೊಂಡರು. ತಕ್ಷಣವೇ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.