ಪುಣೆ (ಮಹಾರಾಷ್ಟ್ರ): ಬಿಜೆಪಿ ಶಾಸಕ ಪ್ರಯಾಣಿಸುತ್ತಿದ್ದ ಕಾರು ಸೇತುವೆಯಿಂದ 30 ಅಡಿ ಆಳದ ಹಳ್ಳಕ್ಕೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಶಾಸಕ ಸೇರಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಜೆಪಿ ಶಾಸಕ ಜಯಕುಮಾರ್ ಗೋರ್ ತಮ್ಮ ಹುಟ್ಟೂರಾದ ಸತಾರಾ ಜಿಲ್ಲೆಯಲ್ಲಿ ಶನಿವಾರ ನಸುಕಿನ ವೇಳೆ ಅಂಗರಕ್ಷಕರೊಂದಿಗೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಲೋನಾಂಡ್ - ಫಾಲ್ಟನ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕನಿಷ್ಠ 30 ಅಡಿ ಆಳದ ಹಳ್ಳಕ್ಕೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಶಾಸಕ ಗೋರ್ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ. ಶಾಸಕರನ್ನು ಪುಣೆಯ ರೂಬಿ ಹಾಲ್ ಕ್ಲಿನಿಕ್‌ಗೆ ದಾಖಲಿಸಲಾಗಿದೆ. ಅಂಗರಕ್ಷಕ ಮತ್ತು ಚಾಲಕ ಸೇರಿ ಇತರ ಮೂವರು ಗಾಯಾಳುಗಳನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಶಾಸಕ ಗೋರ್ ಸತಾರಾ ಜಿಲ್ಲೆಯ ಮ್ಯಾನ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಬರುತ್ತಿದ್ದಾಗ ರಸ್ತೆ ಅಪಘಾತ: ಇಬ್ಬರು ಸಾವು