ನಾಡಿಯಾಡ್(ಗುಜರಾತ್): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾದ ಡಿಜಿಟಲ್ ಇಂಡಿಯಾವನ್ನು ಗುಜರಾತ್ ಚುನಾವಣೆಯಲ್ಲಿ ಅವರದೇ ಪಕ್ಷದ ಅಭ್ಯರ್ಥಿ ಭರ್ಜರಿಯಾಗಿ ಬಳಕೆ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ರೋಬೋಟ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಅದರಿಂದಲೇ ಜನರ ಬಳಿ ತೆರಳಿ ಮತ ಕೇಳುತ್ತಿದ್ದಾರೆ.
ಗುಜರಾತ್ನ ಖೇಡಾ ಜಿಲ್ಲೆಯ ನಾಡಿಯಾಡ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜಭಾಯ್ ದೇಸಾಯಿ ಅವರು ರೋಬೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದಾರೆ. ಬಿಜೆಪಿಯ ಪಂಕಜಭಾಯ್ ದೇಸಾಯಿ ಅವರು ನಾಡಿಯಾಡ್ ವಿಧಾನಸಭಾ ಕ್ಷೇತ್ರದಿಂದ ಆರನೇ ಬಾರಿಗೆ ಸ್ಪರ್ಧಿಗೆ ಇಳಿದಿದ್ದಾರೆ. ಈ ಬಾರಿ ಪ್ರಚಾರಕ್ಕೆ ನಾನಾ ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭರವಸೆಗಳುಳ್ಳ ಕರಪತ್ರಗಳನ್ನು ರೋಬೋ ಮೂಲಕವೇ ಜನರಿಗೆ ಹಂಚಲಾಗುತ್ತಿದೆ.
ಈ ಕುರಿತು ಮಾತನಾಡಿದ ಪಂಕಜ್ ಪಟೇಲ್, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ರೋಬೋಟ್ಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿಯ ಐಟಿ ಸೆಲ್ನಿಂದ ಈ ರೋಬೋವನ್ನು ನೀಡಲಾಗಿದೆ. ಪಕ್ಷದ ಅಧ್ಯಕ್ಷರು ಕೂಡ ಇದರ ಬಳಕೆಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಚುನಾವಣೆ ವೇಳೆ ಡಿಜಿಟಲ್ ಬಳಕೆಯ ಭಾಗವಾಗಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್, ಇನ್ಸ್ಟಾಗ್ರಾಮ್ಗಳಲ್ಲಿ ಗ್ರೂಪ್ ಮಾಡಿ ಪ್ರಚಾರ ಮಾಡಲಾಗುತ್ತದೆ. ಬಿಜೆಪಿ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ರೋಬೋಗಳನ್ನೇ ಚುನಾವಣಾ ಪ್ರಚಾರ ಕಣಕ್ಕೆ ಇಳಿಸಿರುವುದು ಗಮನಾರ್ಹ ಸಂಗತಿಯಾಗಿದೆ.
ಓದಿ: ಬೇಕಾದ್ರೆ ಮದುವೆ ಮಾಡಿಕೊಳ್ಳಿ, ಲಿವ್ ಇನ್ ರಿಲೇಷನ್ಶಿಪ್ ಬೇಡ: ಕೇಂದ್ರ ಸಚಿವರ ಹಿತವಚನ