ಬಿಹಾರ: ಇಲ್ಲಿನ ಸಣ್ಣ ಪಟ್ಟಣಗಳಲ್ಲಿ ಈ ವಿಶಿಷ್ಟ ಸಿಹಿತಿಂಡಿ ಬಲು ಫೇಮಸ್. ರಾಮ್‌ಡೇ ಅಲ್ಲಿ ತಯಾರಿಸಿದ 'ಲೈ' ಹೆಸರನ್ನು ಕೇಳಿದ್ರೆ ಸಾಕು, ಅದನ್ನು ಸವಿದವರ ಬಾಯಲ್ಲಿ ನೀರೂರದೇ ಇರದು. ಪಾಟ್ನಾದಿಂದ ಗಯಾ ಕಡೆಗೆ ಹೋಗುವ ದಾರಿ ಮಧ್ಯೆ ಮತ್ತು ಧನ್ರುವಾ-ಪಾಟ್ನಾ ರಸ್ತೆ ಮಾರ್ಗವಾಗಿ ಮೋಕಾಮಾ ಕಡೆಗೆ ಹೋಗುವ ಹಾದಿಯ ನಡುವೆ ಇರುವ ಈ ರಾಮ್ಡೇನಲ್ಲಿ ಖೋಯಾ ಮತ್ತು ಮಾವಾ ಕಿ ಲೈ ಅನ್ನು ಸವಿಯಲೇಬೇಕು. ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಅದರ ರುಚಿಗೆ ಮನ ಸೋತಿರುವುದು ವಿಶೇಷ.
'ಲೈ'ನ ವಿಶೇಷತೆಯೆಂದ್ರೆ ಅದು ಹಲವು ದಿನಗಳವರೆಗೆ ಹಾಳಾಗಲ್ಲ. ಅಲ್ಲದೆ, ಫ್ರಿಜ್ ಇಲ್ಲದೆ, ಇದನ್ನು ಹಲವಾರು ದಿನಗಳವರೆಗೆ ರುಚಿ ಕೆಡದಂತೆ ರಕ್ಷಿಸಬಹುದು. ಈ 'ಲೈ' ತಯಾರಿಸುವ ವಿಧಾನ ಸಹ ಅಷ್ಟೇ ವಿಶೇಷವಾಗಿರುತ್ತೆ.
ಈ ಜನಪ್ರಿಯ ಸಿಹಿತಿಂಡಿಗಳ ಇತಿಹಾಸವೂ ಸಹ ಅಷ್ಟೇ ಆಸಕ್ತಿದಾಯಕವಾಗಿದೆ. ಯಾಕೆಂದರೆ, ಇದರ ತಯಾರಿಕಾ ವಿಧಾನದಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ.
ಹಲವರು ರಾಂಪದರಥ್ ಸಾವೊ ಅವರು ಮೊದಲು ಈ ಲೈ ತಿನಿಸನ್ನು ಸಿದ್ಧಪಡಿಸಿದರು ಎಂದು ನಂಬುತ್ತಾರೆ. ಬಾರ್ಹ್ನಲ್ಲಿ 60 ಘಟಕಗಳು ಇದ್ದು, ಅಲ್ಲಿ ಲೈ ತಯಾರಿಸಲಾಗುತ್ತದೆ. ಅನೇಕ ಘಟಕಗಳು ಪ್ರತಿದಿನ 100 ಕ್ವಿಂಟಾಲ್ ಲೈ ಅನ್ನು ಉತ್ಪಾದಿಸುತ್ತವೆ. ಇದು 2 ಲಕ್ಷದಿಂದ 2.5 ಲಕ್ಷ ರೂ. ಆದಾಯವನ್ನು ಗಳಿಸುತ್ತಿದ್ದು, ಸುಮಾರು 7000 ಜನರು ಈ ಸಿಹಿತಿಂಡಿ ತಯಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ.
ಧನರುವಾದಲ್ಲಿ ತಯಾರಾಗುವ ಲೈ ಸದ್ಯ ಹೆಚ್ಚು ಹೆಸರುವಾಸಿಯಾಗುತ್ತಿದೆ. ಲೈ ನಿಂದಲೇ ಧನರುವಾ ಎಂಬ ಊರಿನ ಹೆಸರು ಪ್ರಸಿದ್ಧಿ ಪಡೆಯುತ್ತಿದೆ. ಶುದ್ಧ ಖೋವಾದಿಂದ ತಯಾರಾದ ಈ ರುಚಿಕರ ಖಾದ್ಯವನ್ನು ವಿದೇಶಿ ಪ್ರವಾಸಿಗರು ಸಹ ಇಷ್ಟಪಡುತ್ತಾರೆ. ಬೋಧ್ ಗಯಾಗೆ ಹೋಗಿ ಈ ಮಾರ್ಗದಿಂದ ಹಿಂದಿರುಗುವಾಗ ವಿದೇಶಿ ಪ್ರವಾಸಿಗರು ಧನರುವಾದ ಲೈ ಅನ್ನು ತಮ್ಮ ಪ್ರವಾಸದ ಗುರುತಾಗಿ ಅವರ ದೇಶಕ್ಕೆ ಕೊಂಡೊಯ್ಯುತ್ತಾರೆ.
ಧನರುವಾದಲ್ಲಿನ ಅತ್ಯಂತ ಹಳೆಯ ಅಂಗಡಿಯಾದ 'ವಿಜಯ್ ಲೈ ಶಾಪ್' ತುಂಬಾ ಹೆಸರುವಾಸಿಯಾಗಿದೆ. ಲೈ ನ ಪ್ರಸ್ತುತ, ಮಾರುಕಟ್ಟೆ ಬೆಲೆ 1 ಕೆಜಿಗೆ 330 ರಿಂದ 350 ರೂಪಾಯಿ. ಒಂದು ಲೈ ಅನ್ನು ತಯಾರು ಮಾಡಲು 6.25 ಪೈಸೆ ವೆಚ್ಚವಾಗುತ್ತದೆ. ಬಿಹಾರದಲ್ಲಿ ಲೈ ತಯಾರಿಕೆಯೇ ಬಹುದೊಡ್ಡ ವ್ಯಾಪಾರವಾಗಿದೆ. ಇಲ್ಲಿ ಸುಮಾರು 150 ಅಂಗಡಿಗಳಿವೆ ಮತ್ತು ಅದರ ವಾರ್ಷಿಕ ವಹಿವಾಟು ಸುಮಾರು 5 ಕೋಟಿ ರೂಪಾಯಿ.
ಲೈನ ರುಚಿಯನ್ನು ಮತ್ತಷ್ಟು ವಿಸ್ತರಿಸಲು ಅದರ ವ್ಯಾಪಾರವನ್ನು ಡಿಜಿಟಲೀಕರಣಗೊಳಿಸಿದ್ರೆ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲಕರವಾಗಲಿದೆ. ಇದರಿಂದ ಲೈ ನ ರುಚಿ ದೇಶ ಸೇರಿದಂತೆ ವಿಶ್ವಾದ್ಯಂತ ಹರಡಲು ಸಹಾಯಕವಾಗುತ್ತದೆ.
ಆಹಾರ ಪ್ರಿಯರ ಮನಗೆದ್ದ ಲೈ ಸಿಹಿ ತಿಂಡಿಯ ರುಚಿಯನ್ನು ಜಗತ್ತಿನಾದ್ಯಂತ ಡಿಜಿಟಲ್ ಮಾರುಕಟ್ಟೆಯ ಮೂಲಕ ಪಸರಿಸಬೇಕಿದೆ. ಯಾಂತ್ರಿಕ ಯುಗದ ಜಂಕ್‌ಫುಡ್ ಭರಾಟೆಯ ನಡುವೆಯೂ ಸಾಂಪ್ರದಾಯಿಕ ಸಿಹಿತಿಂಡಿ ಲೈ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ವಿಶೇಷ.