ಪಾಟ್ನಾ(ಬಿಹಾರ): ಬಿಹಾರದಲ್ಲಿ 2022-23ನೇ ಸಾಲಿನ ಆಯವ್ಯಯ ಮಂಡನೆ ಮಾಡಲಾಗಿದೆ. ಹಣಕಾಸು ಸಚಿವ ತಾರ್ ಕಿಶೋರ್ ಪ್ರಸಾದ್ ಒಟ್ಟು 237691.19 ಕೋಟಿ ರೂ. ವೆಚ್ಚದ ಬಜೆಟ್ ಮಂಡನೆ ಮಾಡಿದ್ದಾರೆ.
ಇಂದಿನ ಬಜೆಟ್ನಲ್ಲಿ ಕಳೆದ ಆಯವ್ಯಯಕ್ಕಿಂತಲೂ 19 ಸಾವಿರ ಕೋಟಿ ರೂ. ಹೆಚ್ಚುವರಿ ಬಜೆಟ್ ಮಂಡನೆಯಾಗಿದೆ. ಪ್ರಮುಖವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದಕ್ಕೋಸ್ಕರ 7712.30 ಕೋಟಿ ರೂ. ಮೀಸಲಿಟ್ಟಿದ್ದಾರೆ.
ಉಳಿದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಕೌಟಿಲ್ಯನ ಅರ್ಧಶಾಸ್ತ್ರದ ಶ್ಲೋಕದೊಂದಿಗೆ ಬಜೆಟ್ ಮಂಡನೆ ಮಾಡಲು ಆರಂಭಿಸಿದ ವಿತ್ತ ಸಚಿವರು, ಆರು ಮೂಲ ಉದ್ದೇಶ ಇಟ್ಟುಕೊಂಡು ಆಯವ್ಯಯ ಮಂಡನೆ ಮಾಡಲಾಗುತ್ತಿದೆ ಎಂದರು.
ಕೃಷಿ ಕ್ಷೇತ್ರಕ್ಕಾಗಿ 7712.30 ಕೋಟಿ ರೂ. ಮೀಸಲಿಟ್ಟಿರುವ ಸಚಿವರು, ರಾಜ್ಯದಲ್ಲಿರುವ ಪ್ರತಿಯೊಬ್ಬರ ಜಮೀನಿಗೆ ನೀರಾವರಿ ಒದಗಿಸುವ ಯೋಜನೆಗೆ 550 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದರು. ಪ್ರಾಣಿಗಳ ಚಿಕಿತ್ಸೆಗಾಗಿ ಕಾಲ್ ಸೆಂಟರ್ ಹಾಗೂ ಬಿಹಾರದಲ್ಲಿ ಮೀನು ಉತ್ಪಾದನಾ ಸೆಂಟರ್ ಓಪನ್ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ 39191. 87 ಕೋಟಿ ಮೀಸಲಿಡಲಾಗಿದ್ದು, ಆರೋಗ್ಯ ಕ್ಷೇತ್ರಕ್ಕಾಗಿ 1613.39 ಕೋಟಿ ಖರ್ಚು ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 2020-25ರ ಅವಧಿಯಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ ಸೃಷ್ಟಿಸುವ ಗುರಿಯೊಂದಿಗೆ ಕೈಗಾರಿಕೋದ್ಯಮಕ್ಕೆ 1643 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ ಕೂಡ ಆರ್ಥಿಕ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೋಸ್ಕರ 2964 ಕೋಟಿ ರೂ. ಮೀಸಲಿಡುತ್ತಿರುವುದಾಗಿ ಹೇಳಿದ್ದು, ಇದರಲ್ಲಿ 1110 ಕೋಟಿ ರೂ. ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಲು ಮುಂದಾಗಿದೆ.
ಬಿಹಾರದಲ್ಲಿ ಎಥಿನಾಲ್ ಉತ್ಪಾದನೆ ಮಾಡಲು 151 ಕಾರ್ಖಾನೆ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದ್ದು, ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಪ್ರತಿಯೊಬ್ಬರಿಗೂ ಲಸಿಕೆ ಹಾಕುವುದು ನಮ್ಮ ಆದ್ಯತೆ ಎಂದರು.