ಪಾಟ್ನಾ(ಬಿಹಾರ): ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋತಿಹಾರಿಯ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ನೀಡಿದ್ದ ಹೇಳಿಕೆಯಿಂದ ಉಂಟಾಗಿರುವ ಊಹಾಪೋಹಗಳು ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ’’ನಿತೀಶ್ ಕುಮಾರ್ ಮತ್ತೆ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದು ಮಾಧ್ಯಮಗಳು ಪ್ರಕಟಿಸಿರುವುದಕ್ಕೆ ನನಗೆ ತೀವ್ರ ನೋವಾಗಿದೆ. ನಾನು ಮೋತಿಹರಿಯ ವಿಶ್ವವಿದ್ಯಾಲಯ ನಿರ್ಮಾಣದ ಬಗ್ಗೆ ಮಾತ್ರ ಮಾತನಾಡಿದ್ದೆ ಮತ್ತು ಬಿಜೆಪಿ ಮಾಡಿದ ಕೆಲಸವನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದ್ದೆ ಅಷ್ಟೇ ಎಂದರು.
ನನ್ನ ಹೇಳಿಕೆಗಳನ್ನು ತಪ್ಪಾಗಿ ಪ್ರಕಟಿಸಬೇಡಿ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ. ನಾವು ಬಿಹಾರದ ಹಿತದೃಷ್ಟಿಯಿಂದ ಮಾತನಾಡಿದ್ದೇನೆ, ಬಿಹಾರಕ್ಕಾಗಿ ಎಷ್ಟು ಕೆಲಸ ಮಾಡಲಾಗಿದೆ ಎಂದು ನಾವು ಜನರಿಗೆ ನೆನಪಿಸುತ್ತಿದ್ದೇವೆ. ನಾವು ಕೆಲಸದಲ್ಲಿ ನಿರತರಾಗಿದ್ದೇವೆ ಎಂದರು.
ಇನ್ನು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸುಶೀಲ್ ಕುಮಾರ್ ಮೋದಿ ಮೊದಲು ಏನಾಗಿದ್ದರು?, ಅವರು ಯಾವಾಗ ಇಲ್ಲಿಗೆ ಬಂದರು?, ಈಗ ಅವರು ಪ್ರತಿದಿನವೂ ಏನೇನೋ ಹೇಳುತ್ತಿದ್ದಾರೆ. ನಾವು ಅವರ ಬಗ್ಗೆ ಹೇಳಲು ಏನೂ ಇಲ್ಲ. ನಾವು ಬಿಜೆಪಿ ನಿಮ್ಮೊಂದಿಗೆ ಬರುತ್ತೇವೆ ಎಂದು ಏಕೆ ಹೇಳುತ್ತೇವೆ. ಈಗ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ನಿಮಗೆ ಯಾರು ಅನುಮತಿ ಕೇಳುತ್ತಿದ್ದಾರೆ? ಎಂದು ನಿತೀಶ್ ಕುಮಾರ್ ಪ್ರಶ್ನಿಸಿದರು.
ಸುಶೀಲ್ ಕುಮಾರ್ ಮೋದಿ ಹೇಳಿದ್ದೇನು?: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ, ನಿತೀಶ್ ಕುಮಾರ್ ಅವರ ಹೇಳಿಕೆಯಲ್ಲಿ ಅರ್ಥವಿಲ್ಲ. ಏಕೆಂದರೆ ಭವಿಷ್ಯದಲ್ಲಿ ಜೆಡಿಯು ಜೊತೆ ಬಿಜೆಪಿ ಮೈತ್ರಿ ಇರುವುದಿಲ್ಲ. ನಿತೀಶ್ ಕುಮಾರ್ ಕಾಂಗ್ರೆಸ್ ಮತ್ತು ಆರ್ಜೆಡಿಯನ್ನು ಹೆದರಿಸಲು ಬಿಜೆಪಿ ಪರವಾದ ಹೇಳಿಕೆ ನೀಡುತ್ತಾರೆ. ಅವರನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡದಿದ್ದರೆ ಬಿಜೆಪಿ ಸೇರಬಹುದೆಂದು ಆರ್ಜೆಡಿ ಮತ್ತು ಕಾಂಗ್ರೆಸ್ ಅನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಗೆ ನಿತೀಶ್ ಕುಮಾರ್ ಅವರ ಅಗತ್ಯವಿಲ್ಲ. ನಿತೀಶ್ ಕುಮಾರ್ ಅವರಲ್ಲಿ ಈಗ ಏನು ಉಳಿದಿದೆ?. ಅವರಿಗೆ ಮತಗಳು ಉಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಿತೀಶ್ ಕುಮಾರ್ ಮೋತಿಹಾರಿಯ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ಕೊಂಡಾಡಿದ್ದರು. ನಾನು ಬದುಕಿರುವವರೆಗೂ ಪ್ರಧಾನಿ ನರೇಂದ್ರ ಮೋದಿಯನ್ನು ಗೌರವಿಸುತ್ತೇನೆ. ಈ ವಿಶ್ವವಿದ್ಯಾಲಯದ ಕೆಲಸ 2016 ರಲ್ಲಿ ಪ್ರಾರಂಭವಾಯಿತು. ಈ ಬಗ್ಗೆ ನನಗೆ ತುಂಬಾ ಖುಷಿಯಿದೆ. ನಮ್ಮ ಸ್ನೇಹ ಎಂದಿಗೂ ಕೊನೆಗೊಳ್ಳುವುದಿಲ್ಲ. ನಾನು ಬದುಕಿರುವವರೆಗೂ ನಿಮ್ಮೊಂದಿಗೆ (ಬಿಜೆಪಿ) ಸಂಬಂಧ ಇಟ್ಟುಕೊಂಡಿರುತ್ತೇನೆ ಎಂದಿದ್ದರು.
ಇದನ್ನೂ ಓದಿ: ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ಬಿಜೆಪಿ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ: ರಾಜಸ್ಥಾನ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ