ಗಾಂಧಿನಗರ (ಗುಜರಾತ್): ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್(59) ಆಯ್ಕೆಯಾಗಿದ್ದಾರೆ. ಇಂದು ಮಧ್ಯಾಹ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಸರಿ ಪಕ್ಷದ ನಾಯಕರು ಭೂಪೇಂದ್ರ ಅವರನ್ನು ರೂಪಾನಿ ಉತ್ತರಾಧಿಕಾರಿಯಾಗಿ ನೇಮಿಸಿ ಮಹತ್ವದ ನಿರ್ಧಾರ ಕೈಗೊಂಡರು.
ಹೈಕಮಾಂಡ್ ಅಚ್ಚರಿಯ ನಡೆ:
ಗುಜರಾತ್‌ನ ನೂತನ ಸಿಎಂ ರೇಸ್ನಲ್ಲಿ ಡಿಸಿಎಂ ನಿತಿನ್ ಪಟೇಲ್, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪುರುಷೋತ್ತಮ್ ರೂಪಾಲಾ ಎಂಬ ಮೂವರು ನಾಯಕರ ಹೆಸರುಗಳು ಮುನ್ನೆಲೆಯಲ್ಲಿತ್ತು. ಈ ನಾಯಕರ ಕುರಿತ ಚರ್ಚೆಯೂ ಜೋರಾಗಿತ್ತು. ಆದರೆ ಅಂತಿಮವಾಗಿ ಭೂಪೇಂದ್ರ ಆಯ್ಕೆಯಾಗಿದ್ದು, ಬಿಜೆಪಿ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಅತಿ ದೊಡ್ಡ ಅಂತರದ ಗೆಲುವು:
ಗುಜರಾತ್‌ನ ಘಾಠಲೋಡಿಯಾ ಕ್ಷೇತ್ರದ ಶಾಸಕ ಭೂಪೇಂದ್ರ ಪಟೇಲ್ ಅವರು 2017ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಶಶಿಕಾಂತ್ ವಾಸುದೇವಭಾಯ್ ಪಟೇಲ್ ಅವರನ್ನು 1,17,000 ಮತಗಳ ಅಂತರದಿಂದ ಸೋಲಿಸಿದ್ದರು. ಇದು ಆ ಚುನಾವಣಾ ಫಲಿತಾಂಶದಲ್ಲಿ ದಾಖಲಾದ ಅತಿ ದೊಡ್ಡ ಮತಗಳ ಗೆಲುವಾಗಿತ್ತು.
ಭೂಪೇಂದ್ರ ಪಟೇಲ್ ಈ ಹಿಂದೆ ಅಹಮದಾಬಾದ್‌ನಲ್ಲಿ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (AUDA) ಅಧ್ಯಕ್ಷರೂ ಆಗಿದ್ದರು. ಇದ್ರ ಜೊತೆಗೆ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಎಎಂಸಿ) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರ
ಇಂಜಿನಿಯರಿಂಗ್ ಪದವೀಧರ ಭೂಪೇಂದ್ರ ಪಟೇಲ್ ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಅವರ ಆಪ್ತರು ಕೂಡಾ ಹೌದು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಇವರಿಗೆ ಮುಖ್ಯಮಂತ್ರಿ ಪಟ್ಟ ಒಲಿದುಬಂದಿದ್ದು, ಅಚ್ಚರಿಯ ಬೆಳವಣಿಗೆಯಾಗಿದೆ.
ಈ ಕ್ಷೇತ್ರದಲ್ಲಿ ಭೂಪೇಂದ್ರ ಪಟೇಲ್ಗೂ ಮೊದಲು ಆನಂದಿಬೆನ್ ಪಟೇಲ್ (ಉತ್ತರಪ್ರದೇಶದ ಈಗಿನ ರಾಜ್ಯಪಾಲರು) ಅಭ್ಯರ್ಥಿಯಾಗಿದ್ದರು. ವಿಶೇಷವೆಂದರೆ, 2014-2016ರ ಅವಧಿಯಲ್ಲಿ ಆನಂದಿಬೆನ್ ಪಟೇಲ್ ಇದೇ ಕ್ಷೇತ್ರದಿಂದ ಗೆದ್ದು ಗುಜರಾತ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು.
ಭೂಪೇಂದ್ರ ಪಟೇಲ್ ಆಯ್ಕೆಯ ಹಿಂದಿನ ಪ್ರಮುಖ ಕಾರಣಗಳು:
- ಭೂಪೇಂದ್ರ ಪಟೇಲ್ ಪಾಟೀದಾರ್ ಸಮಾಜದಿಂದ ಬಂದವರು. ಅವರನ್ನು ಆ ಸಮುದಾಯದ ತಳಮಟ್ಟದ ನಾಯಕ ಎಂದೇ ಪರಿಗಣಿಸಲಾಗಿದೆ.
- 2017ರ ಚುನಾವಣೆಯ ವೇಳೆ 5 ಕೋಟಿಗೂ ಹೆಚ್ಚು ಆಸ್ತಿ ಘೋಷಿಸಿದ್ದರು. ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ನೂತನ ಮುಖ್ಯಮಂತ್ರಿಯಾಗಿ ಪಾಟೀದಾರ್ ಮುಖವನ್ನೇ ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ಬಲವಾದ ಗುದ್ದಾಟವಿತ್ತು. ಮಾಂಡವಿಯಾ ಮತ್ತು ಫಲ್ದು ಸೇರಿದಂತೆ ಎಲ್ಲಾ ಪ್ರಬಲ ನಾಯಕರು ಇದೇ ಪಾಟಿದಾರ್ ಸಮುದಾಯದವರು.
- ಗುಜರಾತ್‌ನಲ್ಲಿ ಪಾಟಿದಾರ ಒಂದು ಪ್ರಬಲ ಜಾತಿಯಾಗಿದ್ದು, ರಾಜಕೀಯ ಆರ್ಥಿಕತೆಯ ಮೇಲೆ ಗಮನಾರ್ಹ ನಿಯಂತ್ರಣ ಹೊಂದಿದ್ದಾರೆ. ಲಾಭದಾಯಕ ಸಹಕಾರಿ ಕ್ಷೇತ್ರ, ಶಿಕ್ಷಣ, ನಿರ್ಮಾಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಇವರು ಹಿಡಿತ ಹೊಂದಿದ್ದಾರೆ. ಪಾಟಿದಾರರು 1995ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಗುಜರಾತ್‌ನಲ್ಲಿ ಬಿಜೆಪಿಯ ಬೆನ್ನೆಲುಬಾಗಿ ನಿಂತರು.
- ಮುಂದಿನ ವರ್ಷ ನಿರ್ಣಾಯಕ ಚುನಾವಣೆಗೆ ಮುಂಚಿತವಾಗಿ ಪಕ್ಷದಲ್ಲಿ ಯಾವುದೇ ಪ್ರಮುಖ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಸಾಂಕ್ರಾಮಿಕದ ನಂತರ ಆಡಳಿತವಿರೋಧಿ ಅಲೆಯನ್ನು ದುರ್ಬಲಗೊಳಿಸಲು ಹೈಕಮಾಂಡ್ ಹೊಸ ಮುಖದೊಂದಿಗೆ ಮತದಾರರ ಬಳಿಗೆ ಹೋಗಲು ಬಯಸಿದೆ ಎಂಬುದು ಈ ಆಯ್ಕೆಯಿಂದ ಸಾಬೀತಾಗುತ್ತಿದೆ.
ಪಾಟಿದಾರರ ಮತಗಳೇಕೆ ಮುಖ್ಯ?:
ಪಾಟಿದಾರರು ಗುಜರಾತಿನ 6 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಶೇ 12 ಅಥವಾ ಸರಿಸುಮಾರು ಎಂಟನೇ ಒಂದು ಭಾಗವನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. 182 ಸ್ಥಾನಗಳಲ್ಲಿ 71 ರಲ್ಲಿ, ಅವರು 15% ಅಥವಾ ಅದಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದಾರೆ.
ಡಿಸೆಂಬರ್ 2017 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಆಡಳಿತಾರೂಢ ಬಿಜೆಪಿ 182 ರಲ್ಲಿ 99 ಸ್ಥಾನ ಗಳಿಸಿ ಸರಳ ಬಹುಮತ ಸಾಧಿಸಿ ಅಧಿಕಾರಕ್ಕೇರಿತು. ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 2022ರಲ್ಲಿ ನಡೆಯಲಿದೆ. ರೂಪಾನಿ ಗುಜರಾತ್ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ ಬಳಿಕ ಭೂಪೇಂದ್ರ ಪಟೇಲ್ ಅವರನ್ನು ಬಿಜೆಪಿ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ. ರೂಪಾನಿ ಪ್ರಸ್ತುತ ಗುಜರಾತ್‌ನ ರಾಜ್‌ಕೋಟ್ ಪಶ್ಚಿಮ ಶಾಸಕರಾಗಿದ್ದಾರೆ.
ಇದನ್ನೂ ಓದಿ: ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ