ಮುಂಬೈ: ಕೇವಲ ಒಂದೇ ಒಂದು ಪಂದ್ಯದ ಫಲಿತಾಂಶದಿಂದ ತಂಡವನ್ನು ಜಡ್ಜ್ ಮಾಡಬಾರದು. ಇನ್ನೂ ಟೂರ್ನಿಯೇ ಆರಂಭವಾಗಿಲ್ಲ, ಕೇವಲ ಒಂದೇ ಅಭ್ಯಾಸ ಪಂದ್ಯವಾಗಿದೆ. ತಂಡದ ಕಾಂಬಿನೇಷನ್ ಬಗ್ಗೆ ಪ್ರಯೋಗ ಮಾಡಲು ಸಮಯಾವಕಾಶ ನೀಡಿ ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೋತಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಒಂದು ಪಂದ್ಯದ ಸೋಲಿನಿಂದ ತಂಡವೊಂದರ ಸಾಮರ್ಥ್ಯವನ್ನು ಅಳೆಯಬಾರದು ಎಂದ ಅವರು, ಅಪ್ಘಾನಿಸ್ತಾನ ತಂಡವು ಈ ವಿಶ್ವಕಪ್ನಲ್ಲಿ ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಲಿದೆ. ಅಪ್ಘಾನಿಸ್ತಾನವು ವಿಶ್ವದಲ್ಲೇ ಉತ್ತಮವಾದ ಸ್ಪಿನ್ ದಾಳಿಯನ್ನು ಹೊಂದಿದ್ದು, ಎಲ್ಲಾ ತಂಡಗಳೂ ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.
ಭಾರತ ತಂಡದಲ್ಲಿನ ನಾಲ್ಕನೇ ಕ್ರಮಾಂಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಕೆಲವೊಮ್ಮೆ ಅನಿರೀಕ್ಷಿತ ಸಂಗತಿಗಳೂ ಕೂಡ ಪ್ರತಿಫಲ ನೀಡುತ್ತವೆ, ಸಮಯಾವಕಾಶ ನೀಡಬೇಕು. ಟೀಂ ಗೆಲುವು ಸಾಧಿಸುವುದೇ ಬಹಳ ಮುಖ್ಯವಾದುದು. ಪ್ರತಿಯೊಬ್ಬ ಆಟಗಾರರಿಗೂ ಅವಕಾಶ ನೀಡಿ ಪಂದ್ಯದಿಂದ ಪಂದ್ಯಕ್ಕೆ ಅವರ ಸಾಮರ್ಥ್ಯ ತಿಳಿಯಬೇಕು. ಅಲ್ಲದೆ ಆಟಗಾರರು ಒತ್ತಡದಲ್ಲಿ ಆಡುವುದು ತರವಲ್ಲ ಎಂದು ಹೇಳಿದರು.
ಇನ್ನು ನಾವು ದೇಶದ ಸೈನಿಕರಿಗೋಸ್ಕರ ವಿಶ್ವಕಪ್ ಗೆದ್ದು ಸಮರ್ಪಿಸುತ್ತೇವೆ ಎಂಬ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿನ್, ಸೈನಿಕರು ದೇಶದ ಹಿರಿಮೆ, ಅವರಿಗೆ ಯಾರೂ ಕೂಡ ಸರಿಸಾಟಿಯಿಲ್ಲ. ಗೌರವಕ್ಕೆ ಅರ್ಹರಾಗಿರುವ ಸೈನಿಕರಿಗೋಸ್ಕರ ಕಪ್ ಗೆಲ್ಲುತ್ತೇವೆ ಎಂಬುದು ಅದ್ಭುತ. ಅಲ್ಲದೆ ಈ ನಿಟ್ಟಿನಲ್ಲಿ ಕಪ್ ಗೆಲ್ಲುವತ್ತ ಹೋರಾಡಿ, ಅದನ್ನು ಗೆಲುವನ್ನು ಸೈನಿಕರಿಗೆ ಸಮರ್ಪಿಸಬೇಕು ಎಂದರು.