ಚೆಂಗಲ್ಪಟ್ಟು (ತಮಿಳುನಾಡು) : ಮಹಿಳೆಯೋರ್ವಳು ಜ್ಯೋತಿಷಿಯ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವನ್ನು ನಾಲ್ಕು ದಿನಗಳು ಮನೆಯಲ್ಲಿಟ್ಟುಕೊಂಡಿದ್ದ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ.
ಮೃತ ದಾಮೋದರನ್ (62) ಎಂಬಾತ ಚೆಂಗಲ್ಪಟ್ಟು ಜಿಲ್ಲೆಯ ಪೆರಿಯಾಪುದೂರ್ ಗ್ರಾಮದವನಾಗಿದ್ದು, ತನ್ನ ಪತ್ನಿ ಶಾರದಾ ಮೃತಪಟ್ಟ ನಂತರ ತನ್ನ ಸಹಾಯಕಿ ರಾಜೇಶ್ವರಿ ಎಂಬುವಳೊಂದಿಗೆ ಸುಮಾರು 6 ವರ್ಷಗಳಿಂದ ವಾಸವಿದ್ದನು.
ನಾಲ್ಕು ದಿನಗಳ ಹಿಂದೆ ದಾಮೋದರನ್ ಮೃತಪಟ್ಟಿದ್ದು, ಆತನ ಸಹಾಯಕಿ ಆ ವಿಷಯವನ್ನು ಮುಚ್ಚಿಟ್ಟಿದ್ದಳು. ಮನೆಯಲ್ಲಿಯೇ ಇದ್ದ ಆಕೆ ಮನೆಯಿಂದ ಹೊರಗೆ ಕಾಲಿಡದೇ ಆಹಾರವನ್ನು ತನ್ನ ಮಕ್ಕಳಿಂದ ತರಿಸಿಕೊಳ್ಳುತ್ತಿದ್ದಳು. ನೆರೆಹೊರೆಯವರು ದಾಮೋದರನ್ ಬಗ್ಗೆ ವಿಚಾರಿಸಿದಾಗ ಆತನು ಬೇರೆಡೆ ಹೋಗಿದ್ದಾನೆಂದು ನೆಪ ಹೇಳುತ್ತಿದ್ದಳು.
ಕೆಲವು ದಿನಗಳ ನಂತರ ಮೃತದೇಹ ವಾಸನೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಬಲವಂತವಾಗಿ ಮನೆಯೊಳಗೆ ಹೋಗಿ ನೋಡಿದಾಗ ಚಾಕುವಿನಿಂದ ಹಲ್ಲೆ ಮಾಡಲು ರಾಜೇಶ್ವರಿ ಯತ್ನಿಸಿದ್ದಾಳೆ. ಈ ವೇಳೆ ವಿಷಯ ತಿಳಿದ ಗ್ರಾಮ ಆಡಳಿತ ಅಧಿಕಾರಿ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ರವಾನಿಸಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.