ಮೆಡ್ಚಲ್ (ತೆಲಂಗಾಣ): ತನ್ನ ಪತಿಯನ್ನು ಕೊಲ್ಲಲು ತಾಯಿ ಮತ್ತು ಸೋದರ ಮಾವ ಬಲವಂತ ಮಾಡಿರುವುದರಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ನಂದಲೂರು ಗ್ರಾಮದ ಕಾತಿ ರಾಮುಲಮ್ಮನ ಮೊದಲ ಮಗಳು ಗಾಯತ್ರಿಯ ವಿವಾಹವು ಅದೇ ಪ್ರದೇಶದ ಸೈದರಾವ್ ಜೊತೆಗೆ ಎರಡು ವರ್ಷಗಳ ಹಿಂದೆ ನಡೆದಿತ್ತು. ಆದರೆ ತಾಯಿ ರಾಮುಲಮ್ಮಗೆ ಮಗಳ ಮದುವೆಯನ್ನು ತನ್ನ ಸಹೋದರನೊಂದಿಗೆ ಮಾಡಿಸಬೇಕೆಂಬ ಆಸೆಯಿತ್ತು.
ಗಾಯತ್ರಿ ಮತ್ತು ಸೈದರಾವ್ ಹೈದರಾಬಾದ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸೈದರಾವ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ರಾಮುಲಮ್ಮ ಮತ್ತು ಸಹೋದರ ಪುಲ್ಲರಾವ್ ಕೂಡ ಹೈದರಾಬಾದ್ನಲ್ಲೇ ವಾಸಿಸುತ್ತಿದ್ದರು.
ರಾಮುಲಮ್ಮನ ಸಹೋದರ ಪುಲ್ಲರಾವ್ ಪತ್ನಿ ಒಂದು ವರ್ಷದ ಹಿಂದೆ ಆತನನ್ನು ತೊರೆದಿದ್ದಳು. ತನ್ನ ಸಹೋದರ ಒಬ್ಬಂಟಿಯಾಗಿರುವುದರಿಂದ ತನ್ನ ಮಗಳು ಅವನನ್ನು ಮದುವೆಯಾಗಬೇಕೆಂದು ರಾಮುಲಮ್ಮ ಬಯಸಿದ್ದಳು.
ಹೀಗಾಗಿ ತಾಯಿ ರಾಮುಲಮ್ಮ ತನ್ನ ಮಗಳಿಗೆ ಸೈದರಾವ್ನನ್ನು ಕೊಲ್ಲಲು ತಿಳಿಸಿ, ಪುಲ್ಲರಾವ್‌ನನ್ನು ಮದುವೆಯಾಗಲು ಹೇಳಿದ್ದಳು. ಪತಿಯನ್ನು ಕೊಲ್ಲುವಂತೆ ತಾಯಿ ಮತ್ತು ಸೋದರ ಮಾವ ಎಷ್ಟೇ ಒತ್ತಾಯಿಸಿದರೂ ಗಾಯತ್ರಿ ನಿರಾಕರಿಸಿದಳು.
ಆದರೆ ಇಬ್ಬರೂ ಗಂಡನನ್ನು ಕೊಲ್ಲಲು ಕಿರುಕುಳ ನೀಡುತ್ತಿದ್ದರು. ತನ್ನ ಗಂಡನನ್ನು ಕೊಲ್ಲಲು ಇಷ್ಟವಿಲ್ಲದೇ ಗಾಯತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
"ನನ್ನ ಪತಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಸಾವಿಗೆ ತಾಯಿ ಮತ್ತು ಸೋದರ ಮಾವ ಕಾರಣ" ಎಂದು ಗಾಯತ್ರಿ ಪತ್ರ ಬರೆದಿದ್ದಾಳೆ. ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.