ನವದೆಹಲಿ: 2002ರಲ್ಲಿ, ಅರುಣ್ ಜೇಟ್ಲಿ ಗುಜರಾತ್ನ ಆಗಿನ ಸಿಎಂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಗೂಡಿ ಗುಜರಾತ್ನಲ್ಲಿ ಕಾಂಗ್ರೆಸ್ ಮೇಲೇಳದಂತೆ ಮಾಡಿದ್ದು ಹಾಗೂ ಮೋದಿ ಪ್ರಧಾನಿ ಹುದ್ದೆಗೆ ಏರುವಲ್ಲಿ ಅರುಣ್ ಜೇಟ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
2002 ರಲ್ಲಿ ಬಿಜೆಪಿ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳಲ್ಲಿ 126 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಸಹಯೋಗವು ಅವರನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡುವಂತೆ ಮಾಡಿತ್ತು. ಡಿಸೆಂಬರ್ 2007ರಲ್ಲಿ, ಅರುಣ್ ಜೇಟ್ಲಿ ಚಳವಳಿ ನಡೆಸಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಏರುವಂತೆ ಮಾಡಿದ್ದರು. ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 117 ಸ್ಥಾನ ಪಡೆದುಕೊಂಡಿತು.
ಹೀಗಾಗಿ ಮೋದಿ ಅವರು ಅರುಣ್ ಜೇಟ್ಲಿ ಅವರನ್ನ ವಿಶೇಷವಾಗಿ ಗುಜರಾತ್‌ಗೆ ವರ್ಗಾಯಿಸುವಂತೆ ಪಕ್ಷದ ಹೈಕಮಾಂಡ್ಗೆ ಮನವಿ ಮಾಡಿದ್ದರು. ಇದು ಗುಜರಾತ್ ಕಥೆಯಾದರೆ, ಸಿಎಂ ಆಗಿದ್ದ ನರೇಂದ್ರ ದಾಮೋದರ್ ದಾಸ್ ಮೋದಿ ಅವರನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ, 2013 ರಲ್ಲೇ ಪಕ್ಷದ ನೇತೃತ್ವ ಕೊಡಿಸಿದ್ದು, ಇದೇ ಜೇಟ್ಲಿ.
ಹೇಗಿದ್ದವು ಆ ದಿನಗಳು...!
2013: ಗೋವಾದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅಂದು ಅಲ್ಲಿನ ಸಿಎಂ ಮನೋಹರ್ ಪರಿಕ್ಕರ್ ಅವರು, ಗುಜರಾತ್ ಸಿಎಂ ನರೇಂದ್ರ ಮೋದಿಗೆ ಪಕ್ಷದ ನಾಯಕತ್ವ ನೀಡಬೇಕು. ಹಾಗೂ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ 2014 ರ ಚುನಾವಣೆ ಎದುರಿಸಬೇಕು ಎಂದು ಮೊದಲ ಬಾರಿಗೆ ಹೆಸರು ಪ್ರಸ್ತಾಪಿಸಿದ್ದರು.
ಕಾರ್ಯಕಾರಿಣಿಯ ಬಹುತೇಕ ಸದಸ್ಯರು ಹಿರಿಯ ನಾಯಕ, ಪಕ್ಷ ಕಟ್ಟಿ ಬೆಳೆಸಿದ್ದ ಅಡ್ವಾಣಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಚಿಂತನೆಯಲ್ಲಿದ್ದರು. ಇದಾದ ಬಳಿಕ ಅಡ್ವಾಣಿ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಮಾಸ್ಟರ್ ಪ್ಲಾನ್ ಸಹ ರೂಪಿಸಿದ್ದರು.
2014: ಈ ವೇಳೆ, ಅರುಣ್ ಜೇಟ್ಲಿ ಆರ್ಎಸ್ಎಸ್ ಸಂಚಾಲಕ ಹಾಗೂ ಹಿರಿಯ ನಾಯಕರ ಮೇಲೆ ಒತ್ತಡ ಹೇರಿ ಮೋದಿ ಅವರನ್ನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಗೋವಾ ಕಾರ್ಯಕಾರಿಣಿ ಬಳಿಕ ದೆಹಲಿ ಕಾರ್ಯಕಾರಿಣಿಯಲ್ಲಿ ಮೋದಿ ಹೆಸರು ಚಾಲ್ತಿಗೆ ಬರುವಂತೆ ಮಾಡಿದರು. ಅಂತಿಮವಾಗಿ ಆರ್ಎಸ್ಎಸ್ ಹಾಗೂ ಬಿಜೆಪಿ ರಾಷ್ಟ್ರೀಯ ಕೋರ್ ಕಮಿಟಿ ಆರರಿಂದ 8 ತಿಂಗಳ ಮೊದಲೇ ಮೋದಿ ಅವರನ್ನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿ, 2014 ರಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಕಮಲ ಅರಳುವಂತೆ ಮಾಡಿದ್ದರು ಅರುಣ್ ಜೇಟ್ಲಿ.
2016 ನವೆಂಬರ್ 08 ರಾತ್ರಿ 8 ಗಂಟೆ: 2016 ನವೆಂಬರ್ 8 ರಂದು ಪ್ರಧಾನಿ ನೋಟ್ ಬ್ಯಾನ್ ಘೋಷಣೆ ಮಾಡಿದ್ದರು. ಅದರ ಹಿಂದಿನ ರೂವಾರಿ ಅರುಣ್ ಜೇಟ್ಲಿ. ಪ್ರಧಾನಿ ಅವರು ನೋಟ್ ಬ್ಯಾನ್ ಏನೋ ಘೋಷಣೆ ಮಾಡಿದರು. ಆದರೆ, ಅದನ್ನ ನಿರ್ವಹಿಸಿದ್ದು, ಪ್ರತಿಪಕ್ಷಗಳ ಅಬ್ಬರದ ಟೀಕೆಗಳಿಗೆ ಸಮರ್ಥ ಪ್ರತ್ಯುತ್ತರ ನೀಡಿದ್ದು, ದೇಶದ ಅರ್ಥ ವ್ಯವಸ್ಥೆಗಳ ಬಗ್ಗೆ ಬಂದ ಟೀಕೆಗಳಿಗೆ ದಾಖಲೆ ಸಮೇತ ಉತ್ತರ ನೀಡುವ ಹೊಣೆ ನಿರ್ವಹಿಸಿದ್ದು ಇದೇ ಅರುಣ್ ಜೇಟ್ಲಿ. ಈ ಮೂಲಕ ಪ್ರಧಾನಿ ಮೋದಿ ಅವರನ್ನ ಅಪಾಯಗಳಿಂದ ಪಾರು ಮಾಡಿದ್ದರು ಜೇಟ್ಲಿ

ರಾತ್ರೋರಾತ್ರಿ ಜಿಎಸ್ಟಿ ಜಾರಿ: ಎರಡು ದಶಕಗಳ ಹೋರಾಟ ಹಾಗೂ ಬೇಡಿಕೆಯನ್ನ ಈಡೇರಿಸಿದ್ದು ಇದೇ ಜೇಟ್ಲಿ. ಒಂದು ರಾಷ್ಟ್ರ ಒಂದು ತೆರಿಗೆ ನೀತಿ ಜಾರಿಗೆ ತರುವಲ್ಲಿ ಅರುಣ್ ಪ್ರಮುಖ ಪಾತ್ರ ವಹಿಸಿದ್ದರು. ರಾತ್ರೋರಾತ್ರಿ ಸಂಸತ್ನ ವಿಶೇಷ ಅಧಿವೇಶನ ನಡೆಸಿ, ಜಿಎಸ್ಟಿ ಜಾರಿ ತರಲಾಯಿತು. ಬಳಿಕ ತೆರಿಗೆ ನೀತಿ ಸರಳಗೊಳಿಸಲು ಸತತವಾಗಿ ಪ್ರಯತ್ನ ಮಾಡಿದ್ದರು.
ಅತಿ ಹೆಚ್ಚು ತೆರಿಗೆಯನ್ನ ತೆಗೆದುಹಾಕಿ ನಾಲ್ಕು ಸ್ಲಾಬ್ಗಳ ತೆರಿಗೆಯ ಪ್ಲಾನ್ ಮಾಡಿದ್ದರು. ಜಿಎಸ್ಟಿಯನ್ನ ಪ್ರತಿಪಕ್ಷಗಳು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದಿದ್ದವು. ಅವುಗಳಿಗೆ ಸಮರ್ಥವಾಗಿ ಉತ್ತರ ನೀಡಿದ್ದು, ಇದೇ ಜೇಟ್ಲಿ. ವಿತ್ತ ಸಚಿವರಾಗಿ ಹಣಕಾಸು ಖಾತೆಯನ್ನ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಬಂದ ಟೀಕೆಗಳಿಗೆ ಅಂಕಿ- ಅಂಶ ಸಮೇತ ಉತ್ತರ ನೀಡಿ ಎದುರಾಳಿಗಳ ಬಾಯಿ ಮುಚ್ಚಿಸಿದ್ದರು.
ಇವೆಲ್ಲ ಕಾರಣಗಳಿಂದ ಅರುಣ್ ಜೇಟ್ಲಿ ಅವರನ್ನ ಮೋದಿ ಸರ್ಕಾರ ಟ್ರಬಲ್ ಶೂಟರ್ ಎಂದೇ ಕರೆಯಲಾಗುತ್ತದೆ.