ವಡೋದರಾ: ಜಗತ್ತನ್ನೇ ಭಯಭೀತಗೊಳಿಸಿರುವ ಚೀನಾದ ವುಹಾನ್ ನಗರದಲ್ಲಿ ಹುಟ್ಟಿರುವ ಅಪಾಯಕಾರಿ ಕೊರೊನಾ ವೈರಸನ್ನು ಆರಂಭದಲ್ಲಿ ನಾವು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಚೀನಾದಿಂದ ಭಾರತಕ್ಕೆ ಮರಳಿದ ಇಬ್ಬರು ವಿದ್ಯಾರ್ಥಿಗಳು ಹೇಳಿದ್ದಾರೆ.
ಗುಜಾರಾತ್ನ ವಡೋದರಾ ಮೂಲದ ಶ್ರೇಯಾ ಜೈಮಾನ್ (18) ಮತ್ತು ವೃಂದ್ ಪಟೇಲ್ (19) ಎಂಬ ಇಬ್ಬರು ಸಹಪಾಠಿಗಳು ಸದ್ಯ ಭಾರತಕ್ಕೆ ಬಂದಿದ್ದಾರೆ. ಇವರಿಬ್ಬರು ವುಹಾನ್ನ ವೈದ್ಯಕೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಚೀನಾದಲ್ಲಿ ಕೊರೋನಾ ಹಬ್ಬಿದ ಬಳಿಕ, ಅಲ್ಲಿ ಸಿಲುಕಿಕೊಂಡಿದ್ದ ನೂರಾರು ಭಾರತೀಯರನ್ನು ವುಹಾನ್‌ನಿಂದ ಭಾರತಕ್ಕೆ ಕರೆತರಲಾಗಿದೆ. ಅಲ್ಲಿಂದ ನೇರವಾಗಿ ಅವರನ್ನು ದೆಹಲಿಗೆ ಕರೆತರಾಗಿತ್ತು. ವೈರಸ್ ಬೇರೆಯವರಿಗೆ ಹಬ್ಬದಂತೆ ಮುಂಜಾಗ್ರತೆ ವಹಿಸುವ ಸಲುವಾಗಿ ದೆಹಲಿಯ ಐಟಿಬಿಪಿ ಶಿಬಿರದಲ್ಲಿ ಸುಮಾರು 17 ದಿನಗಳ ಕಾಲ ಅವರನ್ನು ನಿರ್ಬಂಧಿಸಲಾಗಿತ್ತು. ಸದ್ಯ ಅವರು ವಡೋದರಾದ ತಮ್ಮ ಮನೆಗಳಿಗೆ ಮರಳಿದ್ದಾರೆ.
ಚೀನಾದಲ್ಲಿ ಮಾರಕ ಕೊರೊನಾ ವೈರಸ್ ಹೊರಹೊಮ್ಮುವ ಆರಂಭಿಕ ವರದಿಗಳ ಬಗ್ಗೆ ಈ ಇಬ್ಬರು ವಿದ್ಯಾರ್ಥಿಗಳು ಆರಂಭದಲ್ಲಿ ಲಘುವಾಗಿ ತೆಗೆದುಕೊಂಡಿದ್ದರಂತೆ. ಜನವರಿ ವೇಳೆಗೆ ಇದರ ಪ್ರಭಾವ ವಿಸ್ತರಣೆಯಾದ ಬಳಿಕ ವಾಸ್ತವದ ಬಗ್ಗೆ ಅರಿತರಂತೆ. ಈ ಬಗ್ಗೆ ಖುದ್ದು ವಿದ್ಯಾರ್ಥಿಗಳು ತಮ್ಮ ತವರು ನೆಲಕ್ಕೆ ಬಂದ ಬಳಿಕ ಹೇಳಿದ್ದಾರೆ.
ಸದ್ಯ ಇಬ್ಬರು ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದು, ಚೀನಾದಿಂದ ಭಾರತಕ್ಕೆ ಕರೆತಂದಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಧನ್ಯವಾದ ತಿಳಿಸಿದ್ದಾರೆ.