ಮುಂಬೈ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ವಿಶ್ವದಾದ್ಯಂತ ಹೋರಾಟ ಮುಂದುವರಿದಿದ್ದು, ಇದು ನೈಸರ್ಗಿಕವಾಗಿ ಹುಟ್ಟಿದ್ದಲ್ಲ, ಬದಲಿಗೆ ಚೀನಾದಿಂದ ಹರಿಬಿಟ್ಟಿರುವ ಸೋಂಕು ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಇದೇ ರೀತಿಯ ಅಭಿಮತ ಹೊರಹಾಕಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಹುಟ್ಟಿಕೊಂಡಿರುವುದು ಪ್ರಯೋಗಾಲಯದಿಂದ ಎಂದಿರುವ ಅವರು ಅದು ಸ್ವಾಭಾವಿಕ ಅಥವಾ ನೈಸರ್ಗಿಕವಾಗಿ ಹುಟ್ಟಿಕೊಂಡಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೀಗ ಕೊರೊನಾ ವೈರಸ್ನೊಂದಿಗೆ ನಾವು ಜೀವನ ನಡೆಸುವುದು ಪಾಠ ಮಾಡಿಕೊಳ್ಳಬೇಕಾಗಿದೆ. ಸಾಮಾಜಿಕ ಅಂತರ, ಸಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದನ್ನು ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳು ಲಸಿಕೆ ಕುರಿತು ಸಂಶೋಧನೆಯಲ್ಲಿ ತೊಡಗಿವೆ ಎಂದಿದ್ದಾರೆ.
ಇದೊಂದು ಅನಿರೀಕ್ಷಿತ ಸಮಸ್ಯೆಯಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಇಂತಹ ಸ್ಥಿತಿ ನಿರ್ಮಾಣಗೊಂಡಿದೆ. ಈಗಾಗಲೇ ಕೆಲ ರೈಲು ಪುನರಾರಂಭಗೊಂಡಿದ್ದು, ಕೆಲವೊಂದು ಬಸ್ ಸಂಚಾರ ಮಾಡುತ್ತಿವೆ. ಶೀಘ್ರವೇ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೇ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ಸಹಕಾರಿಯಾಗಲಿದೆ ಎಂದರು.
ಮಹಾಮಾರಿ ಕೊರೊನಾ ವೈರಸ್ನಿಂದ ಈಗಾಗಲೇ ಅಮೆರಿಕದಲ್ಲಿ ಇಲ್ಲಿಯವರೆಗೆ 84,059 ಜನರು ಸಾವನ್ನಪ್ಪಿದ್ದು, 13,89,935 ಜನರಿಗೆ ಸೋಂಕು ತಗುಲಿದೆ. ಇಂಗ್ಲೆಂಡ್ನಲ್ಲಿ 1,31,932 ಜನರಿಗೆ ಈ ಸೋಂಕು ತಗುಲಿದ್ದು, 27 ಸಾವಿರ ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ರಷ್ಯಾದಲ್ಲಿ 2,42,271 ಜನರಿಗೆ ಕೋವಿಡ್ ಸೋಂಕಿದ್ದು, ಅದರಲ್ಲಿ 2,212 ಜನರು ಸಾವನ್ನಪ್ಪಿದ್ದಾರೆ. ಪ್ರಪಂಚದಾದ್ಯಂತ 43,41,872 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 24,99,508 ಸಕ್ರಿಯ ಪ್ರಕರಣಗಳಿವೆ. 15,45,392 ಜನರು ಗುಣಮುಖರಾಗಿದ್ದು, 2,96,972 ಜನರು ಸಾವನ್ನಪ್ಪಿದ್ದಾರೆ.