ನವದೆಹಲಿ: ಮುಂಬೈನಲ್ಲಿ ಈ ಬಾರಿ ಸಾಕಷ್ಟು ಮಳೆ ಸುರಿಯುತ್ತಿದ್ದು, ಪ್ರವಾಹದ ನೀರನ್ನು ನಗರದ ಸುತ್ತಮುತ್ತಲಿನ ನೀರಾವರಿ ಮತ್ತು ಕೈಗಾರಿಕೆಗಳಿಗೆ ಬಳಸಿಕೊಳ್ಳಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಹಾಗೂ ಅಹ್ಮದ್ ನಗರಗಳಲ್ಲಿಯೂ ಕೂಡಾ ಭಾರಿ ಮಳೆಯಾಗುತ್ತಿದ್ದು, ಈ ನೀರನ್ನು ತೋಟಗಾರಿಕೆಗೆ ಬಳಸಬೇಕೆಂದು ನಿತಿನ್ ಗಡ್ಕರಿ ಪತ್ರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಉದ್ಧವ್ ಠಾಕ್ರೆ ಮಾತ್ರವಲ್ಲದೇ ಪತ್ರದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಸಚಿವರಾದ ಬಾಳಾಸಾಹೇಬ್ ಥೋರತ್, ಅಶೋಕ್ ಚವಾಣ್ ಮತ್ತು ಜಯಂತ್ ಪಾಟೀಲ್ ಅವರ ಹೆಸರುಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
"ಪ್ರತಿ ವರ್ಷ ಮುಂಬೈ ನಗರವು ಪ್ರವಾಹದಿಂದಾಗಿ ಭಾರಿ ನಷ್ಟ ಅನುಭವಿಸುತ್ತಿದೆ. ಪ್ರವಾಹದಿಂದಾಗಿ ಪ್ರಾಣಹಾನಿ, ಆಸ್ತಿಪಾಸ್ತಿ ಮತ್ತು ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಆದ್ದರಿಂದ ನಷ್ಟವನ್ನು ತಪ್ಪಿಸಲು ಪ್ರವಾಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಯೋಜನೆಯನ್ನು ಸಿದ್ಧಪಡಿಸುವ ತುರ್ತು ಅವಶ್ಯಕತೆಯಿದೆ" ಎಂದು ಕೇಂದ್ರ ಸಚಿವರು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದರ ಜೊತೆಗೆ "ಮಳೆನೀರು ಸಮುದ್ರಕ್ಕೆ ಸೇರುವ ಕಾರಣದಿಂದ ಸಮುದ್ರದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ಹಿನ್ನೀರು ಹಾಗೂ ಒಳಚರಂಡಿ ವ್ಯವಸ್ಥೆಗೂ ತೊಂದರೆಯಾಗುತ್ತದೆ. ವ್ಯವಸ್ಥಿತವಾಗಿ ಯೋಜನೆಯೊಂದನ್ನು ರೂಪಿಸಿದರೆ ಪ್ರವಾಹ ನೀರನ್ನು ಥಾಣೆಯ ಕಡೆಗೆ ತಿರುಗಿಸಬಹುದು ಮತ್ತು ಸಂಸ್ಕರಿಸಿದ ನಂತರ ಆಣೆಕಟ್ಟಿನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಗಡ್ಕರಿ ಹೇಳಿದ್ದಾರೆ.
ಇದೇ ನೀರನ್ನು ಕೈಗಾರಿಕೆಗಳು ಹಾಗೂ ತೋಟಗಾರಿಕೆಗೆ ಬಳಸಬಹುದು ಎಂದು ಗಡ್ಕರಿ ಹೇಳಿದ್ದು, ಮುಂಬೈ ಬಳಿಯ ಮಿಥಿ ನದಿಯಿಂದ ಪ್ರತೀ ವರ್ಷ ಸಾಕಷ್ಟು ನೀರು ಹೊರಹೋಗುತ್ತಿದ್ದು, ಆಣೆಕಟ್ಟು ನಿರ್ಮಾಣ ಮಾಡುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಮೂಲಕ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ನೀರನ್ನು ಬಳಸಿಕೊಳ್ಳಬಹುದು ಎಂದು ಪತ್ರದಲ್ಲಿ ಬರೆದಿದ್ದಾರೆ.