ಲಖನೌ(ಉತ್ತರ ಪ್ರದೇಶ): ಸುಮಾರು ಏಳು ತಿಂಗಳ ನಂತರ ಅಕ್ಟೋಬರ್ 19 ರಿಂದ ರಾಜ್ಯಾದ್ಯಂತ 9 ರಿಂದ 12ನೇ ತರಗತಿ ಶಾಲೆಗಳ ಪುನಾರಂಭಕ್ಕೆ ಉತ್ತರ ಪ್ರದೇಶ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ.
8ನೇ ತರಗತಿಗಿಂತ ಒಳಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಮುಂದುವರಿಯುತ್ತದೆ ಎಂದು ತಿಳಿಸಿದೆ. ಶಾಲಾ ತರಗತಿಗಳು ಕೇಂದ್ರ ಗೃಹ ಸಚಿವಾಲಯದ ಸಲಹೆ ಮತ್ತು ಉತ್ತರ ಪ್ರದೇಶ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ನಡೆಯಲಿದೆ.
ಮಾರ್ಗಸೂಚಿಗಳ ಪ್ರಕಾರ, ತರಗತಿಗಳು ಎರಡು ಪಾಳಿಯಲ್ಲಿ ನಡೆಯಲಿದ್ದು, ಪೋಷಕರಿಂದ ಲಿಖಿತ ಒಪ್ಪಿಗೆಯ ಅಗತ್ಯವಿರುತ್ತದೆ. ಶಾಲೆಯ ಗೇಟ್‌ಗಳು, ತರಗತಿಗಳು ಮತ್ತು ವಾಶ್‌ರೂಮ್‌ಗಳ ಬಳಿ ನಿಯಮಿತವಾಗಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಒಂದು ತರಗತಿಯಲ್ಲಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳನ್ನು ಮೀರಬಾರದು ಮತ್ತು ವಿದ್ಯಾರ್ಥಿಗಳು ಸೇರುವುದನ್ನು ತಪ್ಪಿಸುವ ಪ್ರಯತ್ನದ ಫಲವಾಗಿ ಬೆಳಗ್ಗೆ ಯಾವುದೇ ಪ್ರಾರ್ಥನೆ ನಡೆಸುವಂತಿಲ್ಲ ಎಂದಿದೆ. ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆಯಲ್ಲಿ ಹೊರಗೆ ಹೋಗಲು ಅವಕಾಶವಿರುವುದಿಲ್ಲ ಮತ್ತು ಊಟ ಮತ್ತು ನೀರಿನ ಬಾಟಲಿಯನ್ನು ಇತರರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂಬ ಷರತ್ತನ್ನು ಹೇರಲಾಗಿದೆ.