ಲಖನೌ: ಉತ್ತರಪ್ರದೇಶದ ವಿಧಾನಸಭೆಯ ಮೂರು ದಿನಗಳ ಮಾನ್ಸೂನ್ ಅಧಿವೇಶನವು ಇಂದಿನಿಂದ ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್ಗಳ ಮೂಲಕ ಪ್ರಾರಂಭವಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಧಿವೇಶನದ ಅವಧಿಯನ್ನು ಮೂರು ದಿನಗಳವರೆಗೆ ವಿಸ್ತರಿಸಲಾಗಿದೆ.
ಅಸೆಂಬ್ಲಿ ಸ್ಪೀಕರ್ ಹೃದಯ್ ನರೈನ್ ದೀಕ್ಷಿತ್ ಮಾತನಾಡಿ, "ವಿಧಾನಸಭೆಯಲ್ಲಿ ಕೊರೊನಾ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವಾರ ಸದನದ 600 ಸಿಬ್ಬಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಅದರಲ್ಲಿ 20 ಮಂದಿಗೆ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು, ಮಂತ್ರಿಗಳನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಿ ಅಧಿವೇಶನಕ್ಕೆ ಆಗಮಿಸಲು ಅನುಮತಿ ನೀಡಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಲಖನೌದ ಮುಖ್ಯ ವೈದ್ಯಾಧಿಕಾರಿ ಡಾ. ಆರ್.ಪಿ.ಸಿಂಗ್ ಮಾತನಾಡಿ, ವಿಧಾನಸಭೆ ಅಧಿವೇಶನಕ್ಕಾಗಿ ನಡೆಸಿದ ಕೊರೊನಾ ಪರೀಕ್ಷೆಗಳಲ್ಲಿ ರಾಜ್ಯ ಸಚಿವ ಚೌಧರಿ ಉದಯಭನ್ ಸಿಂಗ್ ಮತ್ತು ಐವರು ಶಾಸಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರನ್ನು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರುವ ರಾಜಧಾನಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ವಿಧಾನಸಭೆ ಸದಸ್ಯರಾದ ತೇಜ್‌ಪಾಲ್ ನಗರ ಮತ್ತು ಸಂಜು ದೇವಿ, ಎಂಎಲ್‌ಸಿ ಪರ್ವೇಜ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಹ್ಮದ್ ಹಸನ್ ಕೂಡ ಅಧಿವೇಶನಕ್ಕೆ ಹಾಜರಾಗುತ್ತಿಲ್ಲ. ಆದರೆ, ಕೋವಿಡ್ -19 ನಿರ್ವಹಣೆ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ, ರೈತರ ಸಮಸ್ಯೆಗಳು ಮತ್ತು ಪ್ರವಾಹ ವಿಕೋಪದ ಬಗ್ಗೆ ಚರ್ಚೆಗೆ ಒತ್ತಾಯಿಸುವುದಾಗಿ ಸಮಾಜವಾದಿ ಪಕ್ಷ ಹೇಳಿದೆ.
ಮಾಧ್ಯಮಗಳಿಗೆ ಕಳುಹಿಸಲಾದ ಪ್ರಕಟಣೆ ಪ್ರಕಾರ, ಕೋವಿಡ್ -19 ನೆಗೆಟಿವ್ ಫಲಿತಾಂಶ ಬಂದವರಿಗೆ ಮಾತ್ರ ಅಸ್ಸೆಂಬ್ಲಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಉಳಿದವರಿಗೆ ವಿಧಾನಸಭೆಯ ಹೊರಗಿನಿಂದ ಎಲ್ಇಡಿ ಟಿವಿಗಳ ಮೂಲಕ ವರದಿ ನೀಡಲಾಗುತ್ತದೆ ಎಂದಿದೆ.